ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ನಲ್ಲಿ ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ನಲ್ಲಿ ನಡೆದ ಸೇಂಟ್ ಮೇರಿ ಅಮ್ಮನವರ ಹುಟ್ಟು ಹಬ್ಬದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಶಿವಾಜಿನಗರದ ಬೆಸಿಲಿಕಾ ಮಂದಿರ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಈ ಮಂದಿರದ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮ ಗುರುಗಳ ಮತ್ತು ಸಂಸ್ಥೆಗಳ ಕೊಡುಗೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ. ಇವರ ಈ ಸಾಮಾಜಿಕ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದು ಹೇಳಿದರು.
ಬೆಸಿಲಿಕಾ ಚರ್ಚ್ ನ ಪುನರುಜ್ಜೀವನಕ್ಕೆ ಐದು ಕೋಟಿಗಳ ನೆರವು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.