ಕ್ಯಾಬಿನೆಟ್ನಲ್ಲಿ ಕಸ್ತೂರಿ ರಂಗನ್ ವರದಿ ಚರ್ಚೆ : ಈಶ್ವರ ಖಂಡ್ರೆ
ಕೇರಳದ ವಯನಾಡ್ನಲ್ಲಿ ನಡೆದ ಭೀಕರ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಲವು ನದಿಗಳ ಮೂಲ ಮತ್ತು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪಶ್ಚಿಮಘಟ್ಟ ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಸೂಚನೆ ಮಾಡಿರುವ ಕಸ್ತೂರಿ ರಂಗನ್ ವರದಿಯ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮಘಟ್ಟದ ಹಲವೆಡೆ, ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿವರು ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಪ್ರಾಥಮಿಕ ಕಾರಣ ಎನ್ನಲಾಗಿದೆ. ಹೀಗಾಗಿ ಪಶ್ಚಿಮಘಟ್ಟದಲ್ಲಿ ಸಂಭಾವ್ಯ ದುರಂತ ತಡೆಯಲು ಮುಂಜಾಗರೂಕತಾ ಕ್ರಮವಾಗಿ ಈ ಪ್ರದೇಶದ ಒತ್ತುವರಿ ತೆರವಿಗೆ ಕ್ರಮವಹಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಸೂಚನೆ ಮಾಡಿರುವ ಕಸ್ತೂರಿ ರಂಗನ್ ವರದಿಯ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದೂ ತಿಳಿಸಿದ್ದಾರೆ