ಜೈವಿಕ, ಬಲವರ್ಧಿತ ಬೆಳೆಗಳ 109 ತಳಿಗಳ ಬಿಡುಗಡೆಮಾಡಿದ ಪ್ರಧಾನಿ ನರೇಂದ್ರ ಮೋದಿ
ಅಧಿಕ ಇಳುವರಿ, ಹವಾಮಾನಕ್ಕೆ ಹೊಂದಿಕೊಳ್ಳುವ ಹಾಗೂ ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬಿಡುಗಡೆಗೊಳಿಸಿದರು.
61 ಬೆಳೆಗಳ 109 ತಳಿಗಳಲ್ಲಿ 34 ಕ್ಷೇತ್ರ ಬೆಳೆಗಳು ಹಾಗೂ 27 ತೋಟಗಾರಿಕಾ ಬೆಳೆಗಳು ಸೇರಿವೆ. ಕ್ಷೇತ್ರ ಬೆಳೆಗಳಲ್ಲಿ ಸಿರಿಧಾನ್ಯಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ ಸೇರಿದಂತೆ ವಿವಿಧ ತಳಿಗಳ ಬೀಜಗಳನ್ನು ಬಿಡುಗಡೆ ಮಾಡಲಾಯಿತು.ತೋಟಗಾರಿಕಾ ಬೆಳೆಗಳಲ್ಲಿ ವಿವಿಧ ರೀತಿಯ ಹಣ್ಣುಗಳು, ತರಕಾರಿಗಳು, ಗೆಡ್ಡೆ-ಗೆಣಸುಗಳು, ಮಸಾಲೆಗಳು, ಹೂವುಗಳು ಹಾಗೂ ಔಷಧೀಯ ಸಸ್ಯಗಳನ್ನು ಒಳಗೊಂಡಿವೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಹೊಸ ಬೆಳೆ ತಳಿಗಳ ಪ್ರಾಮುಖ್ಯತೆಯನ್ನು ಚರ್ಚಿಸಿ ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ನೈಸರ್ಗಿಕ ಕೃಷಿಯಿಂದಾಗುವ ಪ್ರಯೋಜನಗಳು ಹಾಗೂ ಸಾವಯವ ಕೃಷಿ ಕುರಿತಂತೆ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ನಂಬಿಕೆ ಕುರಿತು ತಿಳಿಸಿದ ಪ್ರಧಾನಿ, ಸಾವಯವ ಆಹಾರ ಸೇವಿಸಲು ಜನರು ಬಯಸುತ್ತಿದ್ದು, ಸಾವಯವ ಆಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರಗಳು ಪ್ರತಿ ತಿಂಗಳು ಅಭಿವೃದ್ಧಿ ಪಡಿಸುತ್ತಿರುವ ಹೊಸ ಬೆಳೆತಳಿಗಳ ಪ್ರಯೋಜನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಪೂರ್ವಭಾವಿಯಾಗಿ ತಿಳಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಚೌಹಾಣ್, ಪ್ರಧಾನಿ ಬಿಡುಗಡೆಗೊಳಿಸಿದ ಹೊಸ 109 ತಳಿಗಳು ರೈತರ ಆದಾಯ ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದರು. ಈ ತಳಿಗಳು ಹವಾಮಾನ ಸ್ನೇಹಿಯಾಗಿದ್ದು, ಪ್ರತಿಕೂಲ ಹವಾಮಾನದಲ್ಲೂ ಉತ್ತಮ ಫಸಲು ನೀಡಬಲ್ಲವು. ಈ ತಳಿಗಳು ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.