33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಘೋಷಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ
ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ಸ್ಥಾಪನೆಗೊಂಡಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಘೋಷಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಅವರು, ಈ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ 450 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಸಮಾಜ ಕಲ್ಯಾಣ ಹಾಗೂ ಗೃಹ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ . ಈ ವಿಚಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.
ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಅದರಂತೆ ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರಿನಲ್ಲಿ ಎರಡು ಠಾಣೆಗಳನ್ನು ತೆರೆಯಲಾಗುವುದು ಎಂದರು. ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸದ್ಯದಲ್ಲೇ ನಡೆಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ದಿನಾಂಕ ನಿರ್ಣಯಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲಾಗಿದೆ.
ಸದ್ಯಕ್ಕೆ ಎರಡು ವಾರಗಳ ಕಾಲ ಅಧಿವೇಶನ ನಡೆಸಬೇಕೆಂಬ ಚಿಂತನೆಯಿದೆ ಎಂದು ಎಚ್.ಕೆ ಪಾಟೀಲ್ ತಿಳಿಸಿದರು.
Discussion about this post