ಮಂಗಳೂರು ಸಂಸದರ ದನಿ ಕುಗ್ಗಿರೋದೇ ಸಮಸ್ಯೆಗೆ ಕಾರಣವಂತೆ
ಯಶವಂತಪುರ ಮಂಗಳೂರು ಸೆಂಟ್ರಲ್ ನಡುವೆ ಪ್ರಾರಂಭಗೊಂಡ ರೈಲು ( 16511/512 ) ರೈಲು ಇದೀಗ ಎರಡನೇ ಬಾರಿಗೆ ಕೇರಳಕ್ಕೆ ವಿಸ್ತರಣೆಯಾಗಿದೆ. ಅವಿಭಜಿತ ತುಳುನಾಡಿಗೆ ಅನುಕೂಲವಾಗ್ಲಿ ಎಂದು ಪ್ರಾರಂಭಿಸಿದ್ದ ರೈಲು ಮೊದಲ ಹಂತದಲ್ಲಿ ಕಣ್ಣೂರಿಗೆ ವಿಸ್ತರಣೆಯಾಗಿತ್ತು, ಇದೀಗ ಎರಡನೇ ಬಾರಿಗೆ ಕೋಯಿಕ್ಕೋಡ್ ಗೆ ( kozhikode ) ವಿಸ್ತರಣೆಯಾಗಿದೆ.
2007ರಲ್ಲಿ ಪ್ರಾರಂಭವಾಗಿದ್ದ ಯಶವಂತಪುರ ಮಂಗಳೂರು ಸೆಂಟ್ರಲ್ ರೈಲು 2009ರಲ್ಲಿ ಮಂಗಳೂರಿನಿಂದ ಕಣ್ಣೂರಿಗೆ ವಿಸ್ತರಣೆಯಾಗಿತ್ತು. ಇದೀಗ ಮತ್ತೆ ವಿಸ್ತರಣೆಯಾಗುವುದರಿಂದ ಈ ರೈಲು ಕರಾವಳಿಯಲ್ಲಿ ಓಡುತ್ತದೆ ಅನ್ನೋದು ಬಿಟ್ರೆ ಮತ್ಯಾವ ಲಾಭವೂ ಇರೋದಿಲ್ಲ ಅನ್ನೋದು ಪಶ್ಚಿಮ ರೈಲ್ವೇ ಯಾತ್ರಿ ಸಮಿತಿಯ ಅಭಿಪ್ರಾಯ.
ಇದನ್ನೂ ಓದಿ : ಹಿಂದೂಗಳಲ್ಲದವರಿಗೆ ಪಳನಿ ದೇವಾಲಯ Palani temple ಪ್ರವೇಶವಿಲ್ಲ
ಈ ವಿಸ್ತರಣೆಯಿಂದ ಕೇರಳಿಗರು ಬೆಂಗಳೂರು ತಲುಪಲು ಇದೇ ರೈಲನ್ನು ಅವಲಂಭಿಸುತ್ತಾರೆ. ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಸೀಟುಗಳು ಸಿಗೋದಿಲ್ಲ, ಈಗ್ಲೇ ಕಾದಿರಿಸದ ಬೋಗಿಗಳು ಮಂಗಳೂರು ತಲುಪುವಾಗ್ಲೇ ಭರ್ತಿಯಾಗಿರುತ್ತದೆ. ಮುಂದೆ ಪರಿಸ್ಥಿತಿ ಹೇಗಿರಬಹುದು.
ಹಿಂದೊಮ್ಮೆ ಇದೇ ರೈಲು ವಿಸ್ತರಣೆಯ ಪ್ರಸ್ತಾಪ ಬಂದಾಗ ವಿರೋಧ ವ್ಯಕ್ತವಾಗಿತ್ತು, ರೈಲ್ವೆ ಪ್ರಯಾಣಿಕರ ಆಕ್ರೋಶಕ್ಕೆ ಮಣಿದಿದ್ದ ಸಂಸದ ನಳಿನ್ ಕುಮಾರ್ ಕಟೀಲು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ರೈಲು ವಿಸ್ತರಿಸದಂತೆ ಮನವಿ ಮಾಡಿದ್ದರು. ಆಗ ಅವರು ವಿಸ್ತರಿಸೋದಿಲ್ಲ ಅಂತಾ ಭರವಸೆ ಕೊಟ್ಟಿದ್ರಂತೆ. ಈಗ ಅವೆಲ್ಲವೂ ಸುಳ್ಳಾಗಿದೆ. ದಕ್ಷಿಣ ರೈಲ್ವೆಯ ವಿಸ್ತರಣೆ ಪ್ರಸ್ತಾಪಕ್ಕೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿದೆ.
ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ರಾತ್ರಿ 9.35ಕ್ಕೆ ಹೊರಡುವ ರೈಲು ಬೆಳಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ. 11 ಗಂಟೆಗೆ ಅಲ್ಲಿಂದ ಹೊರಟು 12.40ಕ್ಕೆ ಕೊಯಿಕ್ಕೋಡ್ ತಲುಪಲಿದೆ. ಮತ್ತೆ ಮಧ್ಯಾಹ್ನ 3.30ಕ್ಕೆ ಕೊಯಿಕ್ಕೋಡ್ ನಿಂದ ಪ್ರಯಾಣ ಪ್ರಾರಂಭಿಸುವ ರೈಲು ಸಂಜೆ 5ಕ್ಕೆ ಕಣ್ಣೂರು ತಲುಪಿ, ಬೆಳಗ್ಗೆ 6.35ಕ್ಕೆ ಬೆಂಗಳೂರು ತಲುಪುತ್ತದೆ. ಇದರೊಂದಿಗೆ ಈ ರೈಲಿಗೆ ತಲಶ್ಯೇರಿ, ವಡಗರ ಮತ್ತು ಕುಯಿಲಾಂಡಿಗಳಲ್ಲಿ ನಿಲುಗಡೆ ಕೂಡಾ ನೀಡಲಾಗಿದೆ.
Read this : ಬತ್ತಿ ಹೋಗುತ್ತಿದೆ ಅಮೆಜಾನ್ ನದಿ : ಜಗತ್ತಿನ ಅಂತ್ಯಕ್ಕೆ ಸಿಕ್ತು ಮತ್ತೊಂದು ಮುನ್ಸೂಚನೆ
ಇದೀಗ ರೈಲು ವಿಸ್ತರಣೆಯ ಸುದ್ದಿ ರೈಲ್ವೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ, ಬೆಂಗಳೂರು ಮಂಗಳೂರು ನಡುವೆ ನೆಟ್ಟಗೆ ರೈಲು ತರಲಾಗದ ಸಂಸದರು ನಮಗೆ ಬೇಕಾ ಎಂದು ಪ್ರಶ್ನಿಸಿದ್ದಾರೆ. ಮೈಸೂರು ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಮೇಲಿನ ಕಾಳಜಿಯಿಂದ ಕೆಲಸ ಮಾಡ್ತಾರೆ, ನಳಿನ್ ಇದಕ್ಕೆ ತದ್ವಿರುದ್ಧ ಅನ್ನೋದು ಇವರ ಆಕ್ರೋಶ.
ಮಂಗಳೂರಿಗೆಂದು ತಂದ ಯೋಜನೆಗಳನ್ನು ತಟ್ಟೆಯಲ್ಲಿಟ್ಟು ಕೇರಳಕ್ಕೆ ಕೊಡುವುದಾದ್ರೆ ಇಂತಹ ಜನಪ್ರತಿನಿಧಿಗಳು ಇದ್ದರೆಷ್ಟು ಬಿಟ್ಟರೆಷ್ಟು ಪಾಲಕ್ಕಾಡು ವಿಭಾಗದಿಂದ ಬೇರ್ಪಡಿಸಿ ಮಂಗಳೂರು ವಿಭಾಗ ಸ್ಥಾಪಿಸೋ ಕೆಲಸವೇ ಆಗಿಲ್ಲ, ಒಬ್ಬನೇ ಒಬ್ಬ ಬಿಜೆಪಿ ಸಂಸದರಿಲ್ಲದೆಯೂ ಕೇರಳ ಲಾಭ ಪಡೆಯುತ್ತಿದೆ. ಮೋದಿ ಹೆಸರಲ್ಲಿ ಗೆದ್ದವರು ಮಾತ್ರ ಮತ್ತೆ ಮೋದಿಯ ಹೆಸರಿನಲ್ಲಿ ಮತ ಕೇಳಲು ಸಿದ್ದವಾಗುತ್ತಿದ್ದಾರೆ. ಈ ಬಾರಿ ತಕ್ಕ ಪಾಠ ಕಲಿಸಲೇಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
Discussion about this post