ಶಬರಿಮಲೆ ಈ ಬಾರಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಭಕ್ತರಿಗೆ ತೊಂದರೆ ಕೊಟ್ಟವರಿಗೇನು ಶಿಕ್ಷೆ
ಶಬರಿಮಲೆ : ಮಕರ ಜ್ಯೋತಿ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಶಬರಿಮಲೆ ಅಯ್ಯಪ್ಪನ ( sabarimala ) ಸನ್ನಿಧಿಯಲ್ಲಿ ಮತ್ತೆ ಗೊಂದಲ ಪ್ರಾರಂಭವಾಗಿದೆ. ಸಾಕಷ್ಟು ದಿನಗಳಿಂದ ವಿವಾದಕ್ಕೆ ಗುರಿಯಾಗಿದ್ದ ಅರವಣ ಪ್ರಸಾದವೇ ( aravana prasadam ) ಈ ಬಾರಿಯೂ ಗೊಂದಲಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಬೆಲ್ಲದ ಕೊರತೆ ಕಾಡಿತ್ತು. ಅದಕ್ಕೂ ಮುಂಚೆ ಏಲಕ್ಕಿಯಲ್ಲಿ ಕೀಟನಾಶದ ವಿಷಯ ಪ್ರಸ್ತಾಪವಾಗಿತ್ತು.
ಇದೀಗ ಅರವಣ ಪ್ರಸಾದ ತುಂಬಿಸಲು ಕಂಟೈನರ್ ಅಂದ್ರೆ ಪ್ರಸಾದದ ಡಬ್ಬಿ ಇಲ್ಲ ಅನ್ನುವ ಕಾರಣದಿಂದ ಅರವಣ ಪ್ರಸಾದ ತಯಾರಿಕೆಯನ್ನೇ ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ 2.5 ಲಕ್ಷ ಟನ್ ಅರವಣ ಪ್ರಸಾದ ದಾಸ್ತಾನಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಆದರೆ ಪ್ರತೀ ನಿತ್ಯ 3 ಲಕ್ಷಕ್ಕೂ ಅಧಿಕ ಟಿನ್ ಅರವಣ ಪ್ರಸಾದ ಮಾರಾಟವಾಗುತ್ತಿದೆ. ಹೀಗಾಗಿ ದಾಸ್ತಾನಿರುವ ಅರವಣ ಪ್ರಸಾದದಿಂದ ಭಕ್ತರ ಬೇಡಿಕೆ ಪೂರೈಸಲು ಸಾಧ್ಯವಿಲ್ಲ.
ಇದನ್ನು ಓದಿ : ಶಬರಿಮಲೆಯಲ್ಲಿ ಅಪ್ಪಂ ಅರವಣ ಪ್ರಸಾದ ಉತ್ಪಾದನೆ ಸ್ಥಗಿತ : ಅಯ್ಯಪ್ಪ ಭಕ್ತರಿಗೆ ನಿರಾಶೆ
ಈ ಹಿಂದೆ ಬೆಲ್ಲ ಪೂರೈಕೆಯಲ್ಲಿ ವ್ಯತ್ಯಾಸವಾದ ಕಾರಣ ಅರವಣ ಪ್ರಸಾದ ತಯಾರಿಕೆ ಸ್ಥಗಿತಗೊಂಡಿತ್ತು. ಜೊತೆಗೆ ಅರವಣ ಪ್ರಸಾದ ವಿತರಣೆ ಮೇಲೆ ನಿರ್ಬಂಧ ಹೇರಲಾಗಿತ್ತು. ಇದೀಗ ಕಂಟೈನರ್ ಕೊರತೆಯ ಕಾರಣ ಪ್ರತೀ ಭಕ್ತನಿಗೆ 10 ಅರವಣ ಟಿನ್ ಬದಲು 5 ಟಿನ್ ಮಾತ್ರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಹೊರ ರಾಜ್ಯದ ಯಾತ್ರಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಮಿತಿಯ ಕಾರಣದಿಂದ ಗುಂಪಿನಲ್ಲಿ ಬಂದ ಪ್ರತಿಯೊಬ್ಬರೂ ಅರವಣ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಇದರಿಂದ ಕೌಂಟರ್ ನಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ.
ಈ ಬಾರಿ ಅರವಣ ಪ್ರಸಾದ ತುಂಬಿಸುವ ಕಂಟೈನರ್ ಗಳನ್ನು ಪೂರೈಸಲು ಇಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. 2 ಕೋಟಿ ಕಂಟೈನರ್ ಗಳನ್ನು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಗುತ್ತಿಗೆದಾರರು ನಿಗದಿತ ಸಮಯಕ್ಕೆ ಕಂಟೈನರ್ ತಲುಪಿಸಲದ ಕಾರಣ ಸಮಸ್ಯೆಯಾಗಿದೆ.
ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ದೇವಸ್ವಂ ಬೋರ್ಡ್ ಇದೀಗ ಕಂಟೈನರ್ ಪೂರೈಕೆಗೆ ಹೊಸದಾಗಿ ಟೆಂಡರ್ ಕರೆದಿದ್ದು, ಮೂರನೇ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಅವರು ಪ್ರತೀ ದಿನ ಒಂದು ಲಕ್ಷ ಕಂಟೈನರ್ ಸರಬರಾಜು ಮಾಡಲು ಸಮ್ಮತಿಸಿದ್ದಾರೆ. ಈ ಹಿಂದೆ ಗುತ್ತಿಗೆ ಪಡೆದವರ ಪೈಕಿ ಒಬ್ಬರು ದಿನಕ್ಕೆ 50 ಸಾವಿರ ಕಂಟೈನರ್ ಪೂರೈಸುವುದಾಗಿ ಹೇಳಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಯುವ ವಿಶ್ವಾಸವನ್ನು ದೇವಸ್ವಂ ಮಂಡಳಿ ಹೊಂದಿದ್ದಾರೆ.
ಮಂಡಲ ಪೂಜೆಯ ಹೊತ್ತಿನಲ್ಲಿ ಶಬರಿಮಲೆಯ ಅವ್ಯವಸ್ಥೆಯ ಆಗರವಾಗಿದೆ ಅನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಮಕರ ಜ್ಯೋತಿಯ ಹೊತ್ತಿಗೆ ಪ್ರವಾಹೋಪಾದಿಯಲ್ಲಿ ಅಯ್ಯಪ್ಪನ ಭಕ್ತರು ಆಗಮಿಸುತ್ತಾರೆ. ಈ ಬಾರಿ ಪರಿಸ್ಥಿತಿ ಹೇಗಿರಲಿದೆಯೋ.
Discussion about this post