ಗಣಿಗಾರಿಕೆ ಇಲಾಖೆ ಅಧಿಕಾರಿಗಳ ನೆರಳಿನಡಿಯಲ್ಲೇ ಅಕ್ರಮ ಮಣ್ಣು ಸಾಗಾಟ ನಿರಂತರವಾಗಿದೆ. ಆದರೆ ಭರ್ಜರಿ ಬಾಕ್ಸೈಟ್ ಲೂಟಿ ಬಗ್ಗೆ ಬುದ್ದಿವಂತರ ಜಿಲ್ಲೆಯಲ್ಲಿ ದಿವ್ಯ ಮೌನ
ಮಂಗಳೂರು : ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟದ ವಿಚಾರದ ಕುರಿತಂತೆ ವರದಿ ಪ್ರಸಾರ ಮಾಡಿದ ಖ್ಯಾತ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ TIMES ಯೂಟ್ಯೂಬ್ ವಾಹಿನಿಯಲ್ಲಿ ದ.ಕ ಜಿಲ್ಲೆಯಲ್ಲಿ ಭರ್ಜರಿ ಬಾಕ್ಸೈಟ್ ಲೂಟಿ ಎಂಬ ಶಿರೋನಾಮೆಯಡಿಯಲ್ಲಿ ಈ ವರದಿ ಪ್ರಸಾರವಾಗಿತ್ತು. ಇದೇ ವರದಿಯಲ್ಲಿ ನೆಲದ ಮಣ್ಣು ಮಾರಿ ಮೋಸ ಮಾಡುತ್ತಿರುವವರ ಕರಾಳ ಮುಖವನ್ನು ಬಯಲು ಮಾಡಲಾಗಿತ್ತು. ಈ ವರದಿಯ ಮೂಲಕ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳ ಅಸಲಿ ಮುಖವನ್ನು ಬಯಲು ಮಾಡಲಾಗಿತ್ತು ಕೂಡಾ. ಪರಿಸರಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಅಕ್ರಮದ ಬಗ್ಗೆ ವರದಿ ಮಾಡಿದ ಶಿಬರೂರು ಇದೀಗ ಪ್ರಕರಣ ಎದುರಿಸಬೇಕಾಗಿದೆ.
ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ಪರಿಸರದಲ್ಲಿ ಬಾಕ್ಸೈಟ್ ಅದಿರು ಸಾಗಾಟ ನಡೆಸುತ್ತಿದ್ದ ಲಾರಿಗಳ ಹಾಗೂ ಪೊಲೀಸ್ ಚೆಕ್ ಪೋಸ್ಟ್ ಗಳ ವೀಡಿಯೋ ಮಾಡಿ, ‘ವಿಜಯ TIMES ಯೂಟ್ಯೂಬ್’ ವಾಹಿನಿಯಲ್ಲಿ ದ.ಕ ಜಿಲ್ಲೆಯಲ್ಲಿ ಭರ್ಜರಿ ಬಾಕ್ಸೈಟ್ ಲೂಟಿ ಎಂಬ ಶಿರೋನಾಮೆಯಡಿಯಲ್ಲಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದು, ಜಿಲ್ಲೆಯ ಗಡಿಭಾಗದಲ್ಲಿ ಕೋಮುಗಲಭೆ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿದ್ದ ಕೆ.ಎಸ್.ಆರ್.ಪಿ ಪೊಲೀಸರ ವಿಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಇದರಿಂದ ಮಾಮೂಲು ಸಂದಾಯವಾಗುತ್ತಿದೆ ಎಂಬುದಾಗಿ ವರದಿಯನ್ನು ನೀಡಿರುವುದು ಕಂಡುಬಂದಿರುತ್ತದೆ.
ಸದರಿ ಬಾಕ್ಸೈಟ್ ಅದಿರು ಸಾಗಾಟದ ವಿಚಾರವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿರುವುದಾಗಿದ್ದು, ಇದರಲ್ಲಿ ಪೊಲೀಸ್ ಇಲಾಖೆಯ ಯಾವುದೇ ಪಾತ್ರವಿರುವುದಿಲ್ಲ ಎಂದು ಪ್ರಕರಣದ ಆರೋಪಿಗಳಿಗೆ ತಿಳಿದಿದ್ದರೂ ಕೂಡಾ, ಯಾವುದೇ ದಾಖಲೆ ಅಥವಾ ಪುರಾವೆ ಇಲ್ಲದೇ ಸಾರ್ವಜನಿಕ ವಲಯದಲ್ಲಿ ಪೊಲೀಸರ ಘನತೆಗೆ ದಕ್ಕೆ ಉಂಟು ಮಾಡುವ ದುರುದ್ದೇಶದಿಂದ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ರೀತಿಯಲ್ಲಿ ವೀಡಿಯೋ ಮಾಡಿ ಅಂತರ್ಜಾಲದಲ್ಲಿ ಹರಿಯಬಿಟ್ಟಿರುವ ಆರೋಪಿ ವಿಜಯಲಕ್ಷ್ಮೀ ಶಿಬರೂರು ಹಾಗೂ ವಿಡಿಯೋ ರೆಕಾರ್ಡ್ ಮಾಡಿರುವ ಕ್ಯಾಮರಮೆನ್ ಹಾಗೂ ವಾಹನದ ಚಾಲಕರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 141/2023 ಕಲಂ: 505(1) ಐಪಿಸಿ ಮತ್ತು ಕಲಂ 123 ಕೆ ಪಿ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
Discussion about this post