ಶೀರೂರು ಶ್ರೀಗಳ ಸಾವಿನ ಕುರಿತಂತೆ ತನಿಖೆ ಮುಂದುವರಿದಿದೆ. ಪೊಲೀಸರು ಸಾವಿಗೆ ನಿಖರ ಕಾರಣದ ಬೆನ್ನು ಹತ್ತಿ ಹೊರಟಿದ್ದಾರೆ. ಸಾವಿಗೆ ಕಾರಣ ಬೆನ್ನು ಹತ್ತಿದವರಿಗೆ ಹತ್ತು ಹಲವಾರು ವಿಷಯಗಳು ಸಿಕ್ಕಿದೆ. ಸ್ವಾಮೀಜಿಯ ಕುರಿತಾದ ವರ್ಣರಂಜಿತ ಕಥೆಗಳು ಕೂಡಾ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಈ ನಡುವೆ ಶೀರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತ ಆಚರಣೆಗಾಗಿ ಶಿರಸಿ ಸಮೀಪದ ಸೋಂದಾ ಕ್ಷೇತ್ರಕ್ಕೆ ಉಡುಪಿಯಿಂದ ತೆರಳಿದ್ದಾರೆ.
ತೆರಳುವ ಮುನ್ನ ಶೀರೂರು ಮಠದ ವ್ಯವಸ್ಥಾಪನೆಗೆ ಸಮಿತಿಯೊಂದನ್ನು ರಚಿಸಿದ್ದಾರೆ. ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ ಸ್ವಾಮೀಜಿಯವರು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸೂಚನೆಯನ್ನು ಕೊಟ್ಟಿದ್ದಾರೆ. ಸೋದೆ ಶ್ರೀಗಳು ಹಿಂತಿರುಗಿ ಬರುವ ವೇಳೆಗೆ ಮತ್ತಷ್ಟು ಮಠದ ರಹಸ್ಯಗಳು ಹೊರಬರುವುದರಲ್ಲಿ ಸಂಶಯವಿಲ್ಲ.
ಈ ನಡುವೆ ಶ್ರೀಗಳ ಸಾವಿನ ಬೆನ್ನಲ್ಲೇ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳಿಗೆ ತಲೆ ನೋವು ಶುರುವಾಗಿದೆ. ಕಲ್ಸಂಕ ಬಳಿಯ ಕನಕ ಮಾಲ್ ನಿರ್ಮಾಣಕ್ಕೆ ಶ್ರೀಗಳು ಬ್ಯಾಂಕ್ ನಿಂದ ಸಾಲ ಪಡೆದಿದ್ದಾರೆ.
ಪಡೆದ ಮೊತ್ತ, ಕೊಟ್ಟ ಶ್ಯೂರಿಟಿ ಯಾವುದು ಅನ್ನುವುದು ಗೊತ್ತಾಗಿಲ್ಲ. ಆದರೆ ಸೋದೆ ಶ್ರೀಗಳು ಶಿರಸಿಗೆ ತೆರಳುವ ಮುನ್ನ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳು ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಪ್ರಕರಣ ಗಂಭೀರವಾಗಿದೆ ಎಂದೇ ಅರ್ಥ.
ಸ್ವಾಮೀಜಿ ಮತ್ತು ಶ್ರೀಗಳ ನಡುವೆ ಸಾಲ ಇತ್ಯರ್ಥಪಡಿಸಲು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
Discussion about this post