ಬೆಂಗಳೂರು : ಹೈಕೋರ್ಟ್ ಆವರಣದಲ್ಲಿ ನಮಾಜ್ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ ಆರೋಪದಡಿಯಲ್ಲಿ ಸಂವಾದ ಅನ್ನುವ ಯೂ ಟ್ಯೂಬ್ ಹಾಗೂ ಫೇಸ್ ಬುಕ್ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಎನ್.ಜಿ. ದಿನೇಶ್ ಅವರು ನೀಡಿದ ದೂರಿನ ಆಧಾರದಲ್ಲಿ FIR ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ಹೈಕೋರ್ಟ್ ಅನ್ನು ಹೆಸರಿಸಿ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ವಿಡಿಯೊ ಪ್ರಸಾರ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕರ್ನಾಟಕ ಹೈಕೋರ್ಟ್ ಅನುಮತಿ ಪಡೆಯದೇ ನ್ಯಾಯಾಲಯದ ಆವರಣದಲ್ಲಿ ಅತಿಕ್ರಮ ಪ್ರವೇಶ ಮಾಡಿ, ವಿಡಿಯೊ ಚಿತ್ರೀಕರಣ ಮಾಡಿರುವುದಲ್ಲದೇ, ಅದನ್ನು ಸಂವಾದ ಅನ್ನೋ ಮಾಧ್ಯಮ ಸಂಸ್ಥೆಯು ತನ್ನ ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ “ಕರ್ನಾಟಕ ಹೈಕೋರ್ಟ್ನಲ್ಲಿ ನಮಾಜ್! 2022” ಎಂಬ ತಲೆಬರಹದಡಿಯಲ್ಲಿ ಅಪ್ಲೋಡ್ ಮಾಡಿದೆ. ಆ ವಿಡಿಯೊ ವೈರಲ್ ಆಗಿದ್ದು, ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಈ ವಿಡಿಯೊ ಪ್ರಸಾರ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ಈಚೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ವಿಧಾನಸೌಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮ ಪ್ರವೇಶ) ಮತ್ತು 505 (2)ರ (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವುದು) ಅಡಿ ಅನಾಮಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂವಾದ ಆಪ್ ಲೋಡ್ ಮಾಡಿದ್ದ ವಿಡಿಯೋದಲ್ಲಿ ಹೈಕೋರ್ಟ್ ನ ಕಚೇರಿ ಕೊಠಡಿಯೊಳಗೆ ಇಬ್ಬರು ಮಹಿಳೆಯರು ನಮಾಝ್ ಮಾಡುತ್ತಿದ್ದಾರೆ ಎಂದು ತೋರಿಸಲಾಗಿತ್ತು.
Discussion about this post