ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಆಗಿದ್ದ ಎಡವಟ್ಟು ಸರಿಪಡಿಸಿದ ಸುನಿಲ್ ಕುಮಾರ್
ಬೆಂಗಳೂರು : ಇಂಧನ ಇಲಾಖೆಯನ್ನು ಘಟಾನುಘಟಿ ರಾಜಕೀಯ ನಾಯಕರು ಸಚಿವರಾಗಿ ನಿಭಾಯಿಸಿದ್ದಾರೆ. ಕೆಲವರು ಇಲಾಖೆಯಲ್ಲಿ ಭ್ರಷ್ಟಚಾರ ಮಾಡಿದ ಆರೋಪಕ್ಕೂ ಗುರಿಯಾಗಿದ್ದಾರೆ. ಅದರಲ್ಲೂ ವಿದ್ಯುತ್ ಖರೀದಿ ವಿಚಾರದಲ್ಲಿ ನುಂಗಿದೆಷ್ಟು ಅನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈ ಸಂಬಂಧ ರಚನೆಯಾದ ಸದನ ಸಮಿತಿ ವರದಿಯೇ ಹೊರಗೆ ಬಂದಿಲ್ಲ ಅಂದ್ರೆ ನುಂಗಿದವರ ತಾಕತ್ತು ಎಂತಹುದು ಲೆಕ್ಕ ಹಾಕಿ.
ತಿಂದವರ ತಿಂದ್ರು, ಹೋಗ್ಲಿ ಇಂಧನ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಅನ್ನುವ ದೂರು ಸಾಕಷ್ಟು ಹಿಂದೆಯೇ ಕೇಳಿ ಬಂದಿತ್ತು. ಆದರೆ ಆ ಬಗ್ಗೆ ಯಾವೊಬ್ಬ ಇಂಧನ ಸಚಿವನೂ ಕ್ಯಾರೆ ಅಂದಿರಲಿಲ್ಲ. ಕನ್ನಡ, ಕನ್ನಡಿಗ ಭಾಷಣಕ್ಕೆ ಸೀಮಿತವಾಗಿತ್ತು.
ಇದೀಗ ಇಲಾಖೆಗೆ ನೂತನ ಸಚಿವರಾಗಿ ಬಂದಿರುವ ಸುನಿಲ್ ಕುಮಾರ್, ಇಂಧನ ಇಲಾಖೆಯಲ್ಲಿ ಕನ್ನಡದ ಕಂಪು ಪಸರಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳ ದನಿಗೆ ಸ್ಪಂದಿಸಿರುವ ಅವರು ಮತ್ತದೇ ಲೋಪ ಮರುಕಳಿಸಬಾರದೆಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು, ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಟ 50 ಅಂಕ ಪಡೆದು ತೇರ್ಗಡೆ ಹೊಂದಿದರೆ ಮಾತ್ರ ಅರ್ಹತಾ ಪರೀಕ್ಷೆಗೆ ಅವಕಾಶ ಅಂದಿದ್ದಾರೆ.
ಈಗಾಗಲೇ KPTCL ತನ್ನ ವ್ಯಾಪ್ತಿಯ 5 ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ, ಹಾಗೂ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದ್ದು ಈ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿರಲಿದೆ.
ಕಾಂಗ್ರೆಸ್ ಆಡಳಿತವಿದ್ದ ಸಮಯದಲ್ಲಿ, ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ, ತಾಂತ್ರಿಕ ಹುದ್ದೆಗಳ ನೇಮಕದಲ್ಲಿ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯತಿ ನೀಡಲಾಗಿತ್ತು. ಇಂದರಿಂದ ಅನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು.
Discussion about this post