ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ 11ನೇ ಪುಣ್ಯತಿಥಿ ಕಾರ್ಯವನ್ನು ಸೋಮವಾರ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿತ್ತು. ಪುನೀತ್ ನಿವಾಸದಲ್ಲಿ ವಿಧಿ ವಿಧಾನಗಳನ್ನು ನೆರವೇರಿಸಿದ ಕುಟುಂಬಸ್ಥರು, ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಸ್ಥಳದಲ್ಲಿ ಎಡೆ ಇಟ್ಟು ವಿಶೇಷ ಪೂಜೆ ನೆರವೇರಿಸಲಾಗಿತ್ತು.
ಆದರೆ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ಕುಟುಂಬಸ್ಥರು, ಮನೆ ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಭಿಮಾನಿಗಳಿಗೆ ಈ ವೇಳೆ ಪ್ರವೇಶ ಇರಲಿಲ್ಲ. ಈ ಹಿನ್ನಲೆಯಲ್ಲಿ ಅಪ್ಪು ಅಭಿಮಾನಿಗಳಿಗಾಗಿ ಅರಮನೆ ಮೈದಾನದಲ್ಲಿ ಅನ್ನದಾನ ಆಯೋಜಿಸಲಾಗಿದೆ. 30 ಸಾವಿರಕ್ಕೂ ಅಧಿಕ ಮಂದಿ ಅಪ್ಪು ಹೆಸರಿನಲ್ಲಿ ಅನ್ನದಾನ ಸ್ವೀಕರಿಸುವ ಸಾಧ್ಯತೆಗಳಿದ್ದು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಅನ್ನದಾನ ಸಂದರ್ಭದಲ್ಲಿ ಗೊಂದಲವಾಗದಂತೆ ಭದ್ರತೆ ನೀಡಿ ಎಂದು ರಾಜ್ ಕುಟುಂಬ ಗೃಹ ಇಲಾಖೆಯನ್ನು ಕೋರಿಕೊಂಡಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಕೈಕೊಂಡಿದೆ. ಈಗಿನ ಸಿದ್ದತೆಗಳ ಪ್ರಕಾರ ಒಂದೇ ಸಲ 5 ಸಾವಿರ ಮಂದಿ ಊಟವನ್ನು ನೆರವೇರಿಸಬಹುದಾಗಿದೆ. ವೆಜ್ ಹಾಗೂ ನಾನ ವೆಜ್ ಆಹಾರ ಬಡಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಈ ನಡುವೆ ಪುನೀತ್ ಅಕಾಲಿಕ ಸಾವಿನಿಂದ ಆತ್ಮಹತ್ಯೆ, ಆಘಾತದಿಂದ ಮೃತಪಡುತ್ತಿರುವವರ ಸಂಖ್ಯೆಯೂ ನಿಂತಿಲ್ಲ. ಡಾ. ರಾಜ್ ಕುಟುಂಬ ಕೈ ಮುಗಿದು ಪ್ರಾರ್ಥಿಸುತ್ತಿರುವ ನಡುವೆಯೇ ಅನಾಹುತಗಳು ಸಂಭವಿಸುತ್ತಿದೆ. ಬೇಲೂರಿನಲ್ಲಿ ಪುನೀತ್ ಅಕಾಲಿಕ ಸಾವಿನಿಂದ ಅಘಾತಕ್ಕೆ ಒಳಗಾಗಿದ್ದ ಅಭಿಮಾನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಎಚ್.ಟಿ. ರವಿ ಎಂದು ಗುರುತಿಸಲಾಗಿದ್ದು, ಪುನೀತ್ ಅಂತಿಮ ದರ್ಶನ ಪಡೆದಿದ್ದ ಅವರು ಊರಿಗೆ ಮರಳಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ರವಿಯವರ ಆಶಯದಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
Discussion about this post