ಬೆಂಗಳೂರು : ಕೊರೋನಾ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೆ ಜನಸಾಮಾನ್ಯರ ರಕ್ಷಣೆಗಾಗಿ ಸೇವೆ ಮಾಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ತಾವು ಮತ್ತು ತಮ್ಮ ಕುಟುಂಬದವರು ನೇತ್ರಗಳನ್ನು ದಾನ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಸೋಮವಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಈ ನಡುವೆ ಕಳೆದ ಶುಕ್ರವಾರ ಪುನೀತ್ ಸಮಾಧಿಗೆ ಭೇಟಿ ನೀಡಿದ್ದ ರೇಣುಕಾಚಾರ್ಯ ಪೂಜೆ ಸಲ್ಲಿಸಿ ಬಂದಿದ್ದರು. ಆ ಸಂದರ್ಭದಲ್ಲಿ ಸುದೀರ್ಘ ಫೇಸ್ ಬುಕ್ ಪೋಸ್ಟ್ ಹಾಕಿದ್ದ ರೇಣುಕಾಚಾರ್ಯ, ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಕುಟುಂಬ ಸಮೇತ ತೆರಳಿ ಅಕಾಲಿಕವಾಗಿ ಧೈವಾಧೀನರಾದ ಪವರ್ ಸ್ಟಾರ್, ನಟಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸಂಪ್ರದಾಯದಂತೆ ಹಣತೆಗಳನ್ನು ಹಚ್ಚಿ ಆಗಲಿದ ಮೇರು ನಟನೆಗೆ ನಮನ ಸಲ್ಲಿಸಿದೆವು.
ಚಿಕ್ಕ ವಯಸ್ಸಿಗೆ ಕೋಟ್ಯಾಂತರ ಅಭಿಮಾನಿಗಳಲ್ಲಿ ಸಂಪಾದಿಸಿದ್ದ ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರ ನಿಸ್ವಾರ್ಥ ಸಮಾಜ ಸೇವೆ ಹಾಗೂ ನೇತ್ರದಾನ ನಮಗೆ ಪ್ರೇರಣೆಯಾಗಿದ್ದು, ನಮ್ಮ ಕುಟುಂಬವೂ ಸಹ ನೇತ್ರದಾನ ಮಾಡಲು ನಿರ್ಧರಿಸಿದೆ.
ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ನಟರಾಗಿ ಗುರುತಿಸಿಕೊಳ್ಳದೆ ಅವರು, ಅನೇಕ ಸಮಾಜ ಸೇವೆಗಳನ್ನು ಮಾಡಿದ್ದರು. ಆದ್ದರಿಂದಲೇ ಅವರು ಅತೀ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯ ನಟರಾಗಿ ಬೆಳೆದರು. ಆನಾಥಶ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಹಿರಿಯ ನಾಗರೀಕರಿಗೆ ಸಹಾಯ, ಬಡಮಕ್ಕಳಿಗೆ ಆರ್ಥಿಕ ನೆರವು, ದತ್ತು ಮಕ್ಕಳನ್ನು ಪಡೆದಿದ್ದು, ಸಂಘ ಸಂಸ್ಥೆಗಳಿಗೆ ಹಣಕಾಸಿನ ನೆರವು ಸೇರಿದಂತೆ ಹತ್ತು ಹಲವು ಸೇವೆಗಳನ್ನು ಮಾಡಿದ್ದಾರೆ.
ಅವರ ಸಾಮಾಜಿಕ ಸೇವೆಗಳನ್ನು ಪುನೀತ್ ರಾಜ್ ಕುಮಾರ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜೊತೆ ಚರ್ಚೆಸಿ ನಮ್ಮ ಕೈಲಾದ ರೀತಿಯಲ್ಲಿ ಮುಂದುವರೆಸುತ್ತೇನೆ. ನಾವು ಕೂಡ ನಾನಾ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಸೇವೆಯಲ್ಲಿ ನಮ್ಮದೊಂದು ಅಳಿಲು ಸೇವೆ.
ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅಂಗಾಂಗಳನ್ನು ದಾನ ಮಾಡಿರುವುದು ಮುಂದಿನ ದಿನಗಳಲ್ಲಿ ನಮಗೆಲ್ಲರಿಗೂ ಪ್ರೇರಣೆ ಆಗಿದೆ, ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರವಾಗಿದ್ದರೂ ಅವರು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆವೊರಿದ್ದಾರೆ. ಅವರು ಎಂದೆಂದಿಗೂ ಆಜಾರಮರ.
ನಾನು ಬಾಲ್ಯದಿಂದಲೇ ವರನಟ ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಅವರ ಅನೇಕ ಚಿತ್ರಗಳನ್ನು ನೋಡಿ ಬೆಳೆದವರು. ನಮಗೆಲ್ಲ ಅಣ್ಣಾವ್ರ ಕುಟುಂಬ ಮಾದರಿ. ಒಂದು ಬಾರಿ ಅಮೇರಿಕಾದ ನ್ಯೂಜೆರ್ಸಿಗೆ ಅಕ್ಕ ಸಮ್ಮೇಳನಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾಗ ಪುನೀತ್ ರಾಜ್ ಕುಮಾರ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಮತ್ತು ಅವರ ಸ್ನೇಹ ಆಗಿಯೇ ಇತ್ತು.
ನನ್ನ ಮತಕ್ಷೇತ್ರವಾದ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರನ್ನೇ ಮುಖ್ಯ ಅತಿಥಿಯಾಗಿ ಆಗಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇವು. ಆದರೆ ಅವರ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಸಹೋದರ ಶಿವರಾಜ್ ರಾಜ್ ಕುಮಾರ್ ಬಂದಿದ್ದರು. ಇದು ನಮ್ಮ ಅವರ ನಡುವಿನ ಗೆಳೆತನಕ್ಕೆ ನಿದರ್ಶನ. ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೆಲ್ಲರೂ ನಮ್ಮನ್ನು ಅತ್ಯಂತ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಅಷ್ಟು ದೊಡ್ಡ ನಟರಾಗಿದ್ದರೂ ಅವರ ಸರಳತೆ, ವಿನಯತೆ, ಹಿರಿಯರು- ಕಿರಿಯರು ಎನ್ನದೆ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಹೀಗಾಗಿಯೇ ಅವರು ಎಲ್ಲರಿಗೂ ಅಚ್ಚುಮೆಚ್ಚುಗಿದ್ದರು.
ಇತ್ತೀಚಿಗೆ ನನ್ನ ಮತ ಕ್ಷೇತ್ರವಾದ ಹೊನ್ನಾಳಿ- ನ್ಯಾಮತಿ ಅವಳಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಕೋವಿಡ್ ವಾರಿಯರ್ ಪ್ರಶಸ್ತಿ ಹಾಗೂ ಕೋವಿಡ್ ವಾರಿಯಸ್೯ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ಅಲ್ಲಿನ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಅ ವೇಳೆಗೆ ಬೇರೊಂದು ಕಾರ್ಯಕ್ರಮ ನಿಗಧಿಯಾದ ಪರಿಣಾಮ ಬರಲು ಸಾಧ್ಯವಾಗಲಿಲ್ಲ.
ಪುನೀತ್ ರಾಜ್ ಕುಮಾರ್ ನಿಧನರಾದ ವೇಳೆ ಅವರ ಸಹೋದರರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುವಂತಹದ್ದು. ಅತೀ ಚಿಕ್ಕ ವಯಸ್ಸಿನಲ್ಲಿ ಎತ್ತರಕ್ಕೆ ಬೆಳೆದು ಇನ್ನು ಸಾಕಷ್ಟು ಬೆಳೆಯಬೇಕಾಗಿದ್ದ ಒಬ್ಬ ಯುವನಟ ನಮ್ಮನ್ನು ಬಿಟ್ಟು ಹೋಗಿದ್ದು ಅತ್ಯಂತ ನೋವಿನ ಸಂಗತಿ. ಆದರೂ ಅಭಿಮಾನಿಗಳ ಪಾಲಿನ ಅಪ್ಪು ಎಂದೆಂದಿಗೂ ಕನ್ನಡದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ.
ದೇವರು ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಸದ್ಗತಿ ಕರುಣಿಸಲಿ. ಅವರ ಕುಟುಂಬ, ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’ ಅಂದಿದ್ದರು.
Discussion about this post