ಬೆಂಗಳೂರು : ಇತ್ತೀಚೆಗೆ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿದೆ. ಬಿಜೆಪಿಯೇ ಆಡಳಿತದಲ್ಲಿದ್ದರೂ ಎರಡು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದಿರುವುದು ದೆಹಲಿ ಹೈಕಮಾಂಡ್ ಕೆಂಗಣ್ಣಿಗೆ ಕಾರಣವಾಗಿದೆ. ಈ ಬಗ್ಗೆ ವರದಿ ಕೇಳಿರುವ ಹೈಕಮಾಂಡ್ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡುವಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಸೂಚಿಸಿದೆ.
ಈ ನಡುವೆ ಸೋಲಿಗೆ ಸಾಮೂಹಿಕ ನಾಯಕತ್ವವೇ ಹೊಣೆ ಅನ್ನುವುದು ಬಿಜೆಪಿ ನಾಯಕರ ಮಾತು. ಆದರೆ ಇದು ಮಾಧ್ಯಮಗಳ ಮುಂದೆ ನೀಡುವ ಹೇಳಿಕೆ ಹೊರತು, ಒಳಗಡೆ ಪರಸ್ಪರ ಆರೋಪಗಳು ಮುಂದುವರಿದಿದೆ. ಒಂದು ಕಡೆ ಸೋಲಿಗೆ ಸಿಎಂ ಕಾರಣ ಅನ್ನುವ ದೂರುಗಳು ಬಂದರೆ ಮತ್ತೊಂದು ಕಡೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಎಲ್ಲರನ್ನೂ ಜೊತೆಗೆ ಕರೆದೊಯ್ಯುವಲ್ಲಿ ವಿಫಲರಾಗಿದ್ದಾರೆ ಅನ್ನಲಾಗಿದೆ. ಮಗದೊಂದು ಕಡೆ ವಿಜಯೇಂದ್ರ ಅವರಿಗೆ ಚುನಾವಣೆ ಉಸ್ತುವಾರಿ ಕೊಟ್ಟಿರುತ್ತಿದ್ರೆ ಗೆಲ್ಲಬಹುದಿತ್ತು ಅನ್ನುವ ಮಾತುಗಳು ಕೇಳಿ ಬಂದಿದೆ.
ಇದರೊಂದಿಗೆ ಸರ್ಕಾರ ಮತ್ತು ಪಕ್ಷದ ನಡುವೆ ಹಿಂದಿನಂತೆ ಹೊಂದಾಣಿಕೆ ಇಲ್ಲ ಅನ್ನುವ ಮಾಹಿತಿಗಳು ಡೆಲ್ಲಿ ವರಿಷ್ಠರಿಗೆ ತಲುಪಿದ್ದು, ಕಾಂಗ್ರೆಸ್ ನಾಯಕರನ್ನು ಎದುರಿಸುವಲ್ಲಿ ಬಿಜೆಪಿ ಪದಾಧಿಕಾರಿಗಳು ಸೋತಿದ್ದಾರೆ ಅನ್ನುವುದು ಗೊತ್ತಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವರಿಷ್ಠರು, ನಳಿನ್ ಮತ್ತೊಬ್ಬರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವಂತಾಗಿದೆ. ತಾವೇ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುತ್ತಿಲ್ಲ. ಸಚಿವರು ಕಾರ್ಯಕರ್ತರ ಕೈಗೆ ಸಿಗುವಂತಾಗಬೇಕು ಅನ್ನುವ ನಿಟ್ಟಿನಲ್ಲೂ ನಳಿನ್ ಕಾರ್ಯಮಾಡುತ್ತಿಲ್ಲ. ಹೀಗಾಗಿ ನಳಿನ್ ಅವರನ್ನು ಬದಲಾಯಿಸಿ ದಲಿತ ಮುಖಂಡರೊಬ್ಬರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಸಾಧ್ಯತೆಗಳಿದೆಯಂತೆ.
ಹೀಗಾಗಿ ಶಾಸಕ ಅರವಿಂದ ಲಿಂಬಾವಳಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಅನ್ನಲಾಗಿದೆ.
Discussion about this post