ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ಸಾವು ಇದೀಗ ವಿವಾದಕ್ಕೆ ತಿರುಗಿದೆ. ಕುಟುಂಬ ಸದಸ್ಯರೇ ಈ ಬಗ್ಗೆ ತಗಾದೆ ತೆಗೆದಿಲ್ಲ, ಹಾಗಿದ್ದ ಮೇಲೂ ಪ್ರಚಾರದ ಹುಚ್ಚಿಗೆ ಬಿದ್ದಿರುವ ಕೆಲ ಸಂಘಟನೆಗಳು ಡಾ. ರಾಜ್ ಕುಮಾರ್ ಕುಟುಂಬದ ಫ್ಯಾಮಿಲಿ ಡಾಕ್ಟರ್ ರಮಣರಾವ್ ಅವರನ್ನು ಬಂಧಿಸಿ ಅನ್ನುವ ಹೇಳಿಕೆ ಕೊಟ್ಟಿದೆ. ಇದಕ್ಕೆ ಸಾಥ್ ಕೊಟ್ಟಿರುವ ಕೆಲ ಸುದ್ದಿವಾಹಿನಿಗಳು ಡಾ. ರಮಣರಾವ್ ತಲೆಮರೆಸಿಕೊಂಡಿದ್ದಾರೆ, ಪರಾರಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡುತ್ತಿದೆ.
ಪುನೀತ್ ಅವರ ಸಾವಿನ ಬಗ್ಗೆ ಅನುಮಾನ ಇದ್ದವರು ನೇರವಾಗಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯ ಮೆಟ್ಟಿಲು ಹತ್ತಬೇಕೇ ಹೊರತು, ಬೀದಿಗಳಲ್ಲಿ ಪ್ರತಿಭಟನೆ ಮಾಡುವುದಲ್ಲ, ನ್ಯೂಸ್ ಚಾನೆಲ್ ಸ್ಟುಡಿಯೋದಲ್ಲಿ ಕಿರುಚಾಡುವುದಲ್ಲ.
ಡಾ.ರಮಣರಾವ್ ಏನು ಅನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಪ್ರತಿಯೊಬ್ಬರು ಅವರ ಬಗ್ಗೆ ಗೊತ್ತಿದೆ. ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳ ಫ್ಯಾಮಿಲಿ ವೈದ್ಯರಾಗಿ ಡಾ. ರಮಣರಾವ್ ಗುರುತಿಸಿಕೊಂಡಿದ್ದರೂ ಜನಸಾಮಾನ್ಯರನ್ನು ಅವರು ಮರೆತಿಲ್ಲ. ಕಷ್ಟ ಎಂದು ಹೋದವರಿಗೆ ಸದಾ ಕಾಲ ಸ್ಪಂದಿಸುವ ವಿಶಾಲ ಹೃದಯಿ ಡಾ.ರಮಣರಾವ್.
ಮಾತ್ರವಲ್ಲದೆ ಕಳೆದ ಕಳೆದ 48 ವರ್ಷಗಳಿಂದ ಬೆಂಗಳೂರು ಹೊರವಲಯದ ಟಿ.ಬೇಗೂರು ಎಂಬಲ್ಲಿ ಸಂಡೇ ಕ್ಲಿನಿಕ್ ನಡೆಸುತ್ತಿರುವ ರಮಣರಾವ್ ಸುತ್ತಮುತ್ತಲ ಹಳ್ಳಿಯ ಜನರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅವತ್ತು ಬಂದ ರೋಗಿಗಳಿಗೆ ಮದ್ದು ಮಾತ್ರವಲ್ಲ ಊಟವೂ ಉಚಿತವಾಗಿರುತ್ತದೆ. ಇವರ ಇದೇ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಡಾ.ರಮಣರಾವ್ ತಲೆಮರೆಸಿಕೊಂಡಿದ್ದಾರೆ ಎಂದು ದೂರುವ ಮಂದಿ, ಪ್ರಚಾರಕ್ಕಾಗಿ ಉಚಿತ ಕ್ಲಿನಿಕ್ ನಡೆಸುತ್ತಾರೆ ಎಂದು ದೂರಬಹುದು. ಈ ಉಚಿತ ಕ್ಲಿನಿಕ್ ಅನ್ನು ಡಾ. ರಮಣರಾವ್ MBBS ಪಾಸ್ ಆದ ಮರು ದಿನವೇ ಪ್ರಾರಂಭಿಸಲಾಗಿತ್ತು. ಡಾ. ರಮಣರಾವ್ ತಂದೆಯವರೇ ಇದನ್ನು ಉದ್ಘಾಟಿಸಿದ್ದರು. ಅವತ್ತು ದಿನಕ್ಕೆ 4 ರಿಂದ 5 ಜನ ರೋಗಿಗಳು ಮಾತ್ರ ಬರ್ತಾ ಇದ್ರು. ಆದರೆ ಇವತ್ತು ದಿನಕ್ಕೆ ಸಾವಿರ ಜನ ಬರ್ತಾರೆ ಅಂದ್ರೆ ಡಾ. ರಮಣರಾವ್ ಕೈಗುಣ ಹೇಗಿರಬೇಕು.
ಇನ್ನು ರಮಣರಾವ್ ಅವರ ಉಚಿತ ಕ್ಲಿನಿಕ್ ಗೆ ಟಿ.ಬೇಗೂರಿನ 100 – 110 ಕಿಲೋ ಮೀಟರ್ ದೂರದಿಂದ ಜನ ಬರ್ತಾರೆ. ಶನಿವಾರ ರಾತ್ರಿ ಬಂದು ಕ್ಯೂ ನಿಲ್ಲುತ್ತಾರೆ. ಭಾನುವಾರ 4 ಗಂಟೆಯ ಹೊತ್ತಿಗೆ ಕ್ಯೂನಲ್ಲಿ ನಿಂತವರ ಸಂಖ್ಯೆ 400 ದಾಟಿರುತ್ತದೆ. ಇಷ್ಟೆಲ್ಲಾ ಜನರಿಗೆ ಉಚಿತ ಚಿಕಿತ್ಸೆ ನೀಡಬೇಕು ಅಂದ್ರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.
ಸಮಾಜದ ಬಗ್ಗೆ, ಬಡವರ ಬಗ್ಗೆ, ಗ್ರಾಮೀಣ ಮಂದಿಯ ಬಗ್ಗೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿರುವ ಡಾ. ರಮಣರಾವ್ ಪುನೀತ್ ಆರೋಗ್ಯ ವಿಚಾರದಲ್ಲಿ ಆಟವಾಡಿದ್ರು, ಅವರು ಪರಾರಿಯಾಗಿದ್ದಾರೆ ಎಂದು ದೂರುತ್ತೇವೆ ಅಂದ್ರೆ ನಮ್ಮ ಸ್ಥಿತಿ ಎಲ್ಲಿಗೆ ತಲುಪಿದೆ. ಹೀಗೆ ದೂರುವ ಮಂದಿ ಡಾ. ರಮಣರಾವ್ ಅವರ ಸಮಾಜಸೇವೆಯನ್ನು ತಿಳಿದುಕೊಂಡು ಬರುವುದು ಉತ್ತಮ.
Discussion about this post