ಬೆಂಗಳೂರು : ಶಾಲೆಗೆ ಬಂದ ಮೊದಲ ದಿನವೇ ದಾರಿ ತಪ್ಪಿದ 1 ನೇ ತರಗತಿಯ ಬಾಲಕನನ್ನು ಆಟೋ ತಾಲಕನೊಬ್ಬ ರಕ್ಷಿಸಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಚಾಮರಾಜಪೇಟೆಯಲ್ಲಿರುವ ಹಾಸ್ಟೆಲ್ ನಲ್ಲಿ ಅಜಿತ್ ಹಾಗೂ ಅವರ ಪತ್ನಿ ಅಡುಗೆ ಕೆಲಸ ಮಾಡುತ್ತಾರೆ, ಪುತ್ರ ರೋಹನ್ ನನ್ನು ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯ ಶ್ರೀರಾಮಮಂದಿರ ಶಾಲೆಯಲ್ಲಿ ಒಂದನೇ ತರಗತಿಗೆ ಆಡ್ಮಿಶನ್ ಮಾಡಿದ್ದರು. ಶಾಲೆ ಪ್ರಾರಂಭದ ಮೊದಲ ದಿನ ಅಜಿತ್ ಅವರೇ ರೋಹನ್ ನನ್ನು ಶಾಲೆಗೆ ಬಿಟ್ಟು ಹೋಗಿದ್ದರು.
ಮಧ್ಯಾಹ್ನ ಮಗನನ್ನು ಕರೆದುಕೊಂಡು ಬರಲು ಅಜಿತ್ ಶಾಲೆಗೆ ಬಂದ್ರೆ ಮಗ ಶಾಲೆಯಲ್ಲಿ ಇರಲಿಲ್ಲ. ಶಿಕ್ಷಕರಲ್ಲೂ ಕೇಳಿದರೂ ಸರಿಯಾದ ಉತ್ತರವಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಡಿದ್ದಾರೆ. ಜೊತೆಗೆ ಚಾಮರಾಜಪೇಟೆ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ತಕ್ಷಣ ಸ್ಪಂದಿಸಿದ ಪೊಲೀಸರು ಶಾಲೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಆಗ ರೋಹನ್ ಶಾಲೆಯ ಗೇಟಿನಿಂದ ಹೊರಗಡೆ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ತಕ್ಷಣ ವೈರ್ ಲೆಸ್ ಮೂಲಕ ಮಗು ಕಾಣಿಯಾದ ಬಗ್ಗೆ ಎಲ್ಲಾ ಠಾಣೆಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಈ ವೇಳೆ ಸಂದೇಶಕ್ಕೆ ಪ್ರತಿಕ್ರಿಯಿಸಿದ ವಿಶ್ವೇಶ್ವರಪುರಂ ಪೊಲೀಸರು ಕಾಣೆಯಾಗಿರುವ ಮಗು ನಮ್ಮ ಠಾಣೆಯಲ್ಲಿದೆ ಅಂದಿದ್ದಾರೆ. ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಮಗು ಪೊಲೀಸರ ಕೈ ಸೇರಿದ್ದು ಹೇಗೆ..
ಮೊದಲ ದಿನ ಶಾಲೆಗೆ ಹೋಗಿದ್ದ ರೋಹನ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೌಚಾಲಯಕ್ಕೆ ಹೋಗಿದ್ದಾನೆ. ಈ ವೇಳೆ ಅದ್ಯಾರೋ ಅಪರಿಚಿತರು ಶಾಲೆಗೆ ರಜೆ ಅಂದಿದ್ದಾರೆ. ಇದರಿಂದ ಗಲಿಬಿಲಿಯಾದ ಬಾಲಕ ಶಾಲೆ ಆವರಣದಿಂದ ಹೊರ ಬಂದಿದ್ದಾನೆ. ಮನೆಗೆ ಹೋಗುವ ದಾರಿ ತಿಳಿಯದೆ ಆತಂಕಿತವನಾಗಿದ್ದಾನೆ. ಅದೃಷ್ಟ ಅನ್ನುವಂತೆ ಅ ದಾರಿಯಲ್ಲಿ ಬಂದ ಆಟೋ ಚಾಲಕ ಗೋವಿಂದರಾಜು, ಅನುಮಾನಗೊಂಡು ಮಗುವನ್ನು ಪ್ರಶ್ನಿಸಿದ್ದಾರೆ. ಉತ್ತರಿಸದ ಮಗು ಅಳಲು ಪ್ರಾರಂಭಿಸಿದೆ. ಬಳಿಕ ಮಗುವನ್ನು ಸಮಾಧಾನ ಪಡಿಸಿದ ಗೋವಿಂದರಾಜು ತಮ್ಮದೇ ಆಟೋ ದಲ್ಲಿ ಮಗುವನ್ನು ವಿಶ್ವೇಶ್ವರಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಡೀ ಪ್ರಕರಣದಲ್ಲಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ.
Discussion about this post