ಬೆಂಗಳೂರು : ಕುಮಾರಸ್ವಾಮಿ ಜೊತೆಗೆ ಕಿತ್ತಾಡಿಕೊಂಡು ಕಾಂಗ್ರೆಸ್ ಗೆ ಬಂದ ಜಮೀರ್ ಅಹಮದ್ ಇದೀಗ ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ. ಡಿಕೆ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅವರನ್ನು ಇದೀಗ ಡೆಲ್ಲಿ ವರಿಷ್ಠರು ಗುರುತಿಸಿದ್ದು, ಉತ್ತರ ಪ್ರದೇಶ ಚುನಾವಣೆಯ ಉಸ್ತುವಾರಿ ವಹಿಸುವ ಸಾಧ್ಯತೆಗಳಿದೆ.
ಸಿದ್ದರಾಮಯ್ಯ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಇಂದು ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಭಾನುವಾರ ಪ್ರಿಯಾಂಕಾ ಗಾಂಧಿ ಕಚೇರಿಯಿಂದ ಜಮೀರ್ಗೆ ಕರೆ ಬಂದಿದ್ದು, ಇಂದು ಪ್ರಿಯಾಂಕ ವಾದ್ರಾ ಭೇಟಿಗೆ ಸಮಯ ನೀಡಲಾಗಿದೆ. ಮಾಹಿತಿಗಳ ಪ್ರಕಾರ ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪ್ರಭಾವವಿರುವ ಕ್ಷೇತ್ರಗಳಲ್ಲಿ ಜಮೀರ್ ಆಹಮದ್ಗೆ ಪ್ರಚಾರದ ಹೊಣೆ ವಹಿಸುವ ಸಾಧ್ಯತೆಗಳಿದೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ನ ಮತ ಬ್ಯಾಂಕ್ ಸೆಳೆಯಲು ಒವೈಸಿ ಪ್ರಯತ್ನ ಪ್ರಾರಂಭಿಸಿದ್ದಾರೆ. ಪ್ರತಿಯಾಗಿ ಜಮೀರ್ ಅವರನ್ನು ಉತ್ತರ ಪ್ರದೇಶದಲ್ಲಿ ಪರಿಚಯಿಸಲು ಕಾಂಗ್ರೆಸ್ ಮುಂದಾಗಿದೆಯಂತೆ. ಅಲ್ಲಿಗೆ ಜಮೀರ್ ಹೋರಾಟ ಯೋಗಿ ಆದಿತ್ಯನಾಥ್ ವಿರುದ್ಧವಲ್ಲ, ಬದಲಾಗಿ ಒವೈಸಿ ವಿರುದ್ಧ ಅನ್ನುವುದು ಸ್ಪಷ್ಟ.
ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಸೋನಿಯಾ ಗಾಂಧಿ ಭೇಟಿಗೆ ಹೋಗಿದ್ದಾಗ ಜಮೀರ್ ಅವರನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ರೆ, ಜಮೀರ್ ದೆಹಲಿಯಲ್ಲೇ ಉಳಿದುಕೊಂಡಿದ್ದರು. ಒಂದು ವೇಳೆ ಜಮೀರ್ ಗೆ ಉತ್ತರ ಪ್ರದೇಶದ ಚುನಾವಣಾ ಹೊಣೆ ಸಿಕ್ರೆ ಡಿಕೆಶಿ ವಿರುದ್ಧ ಜಮೀರ್ ಒಂದು ಇಂಚು ಎತ್ತರವಾದಂತೆ ತೋರಿಸಿಕೊಳ್ಳುವುದು ಪಕ್ಕಾ.
Discussion about this post