ಬೆಂಗಳೂರು: ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಈ ಹಿಂದೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲು ಕೋರಿ ಉಮೇಶ್ ರೆಡ್ಡಿ ಪರ ವಕೀಲ ಬಿ.ಎನ್. ಜಗದೀಶ್ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿ ಭವನದಲ್ಲಿ ಕ್ಷಮಾದಾನ ಅರ್ಜಿ ವಿಳಂಭವಾಗಿದೆ. 10 ವರ್ಷಗಳಿಂದ ಒಂಟಿಯಾಗಿ ಉಮೇಶ್ ರೆಡ್ಡಿಯನ್ನು ಜೈಲಿನಲ್ಲಿ ಇರಿಸಲಾಗಿದೆ ಎಂದು ಜಗದೀಶ್ ವಾದ ಮಂಡಿಸಿದ್ದರು.
ಆದರೆ ಈ ವಾದ ಒಪ್ಪದ ಹೈಕೋರ್ಟ್ ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬ ಆಗಿದೆ ಅನ್ನುವ ಕಾರಣಕ್ಕೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿಸಲು ಸಾಧ್ಯವಿಲ್ಲ ಅಂದಿತ್ತು. ಈ ವೇಳೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ತನಕ ಗಲ್ಲಿಗೇರಿಸಬಾರದು ಅನ್ನುವ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ, 6 ವಾರಗಳ ಕಾಲ ಅವಕಾಶ ನೀಡಿದೆ.
1998ರ ಫೆಬ್ರವರಿ 28ರಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ 2007ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ 2017ರಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡಾ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ನಂತರ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗೆ ಸಲ್ಲಿಕೆಯಾಗಿತ್ತು. 2013ರಲ್ಲಿ ಅರ್ಜಿ ತಿರಸ್ಕಾರಗೊಂಡಿತ್ತು.
Discussion about this post