ಕೇರಳದಲ್ಲಿ ಅಬ್ಬರಿಸಿದ್ದ ನಿಫಾ, ನಿಯಂತ್ರಣಕ್ಕೆ ಬಂತು ಅನ್ನುವಷ್ಟರಲ್ಲಿ ದಕ್ಷಿಣ ಕನ್ನಡದಲ್ಲಿ ಆತಂಕ ಶುರುವಾಗಿದೆ. ಕೇರಳದ ಕೋಯೋಕ್ಕೋಡ್ ನಲ್ಲಿ 12 ವರ್ಷದ ಬಾಲಕ ನಿಫಾಗೆ ಬಲಿಯಾದ ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ವ್ಯಕ್ತಿಯೊಬ್ಬರಲ್ಲಿ ನಿಫಾ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಗೋವಾದ RTPCR ಕಿಟ್ ತಯಾರಿಸುವ ಖಾಸಗಿ ಪ್ರಯೋಗಾಲಯದಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿರುವ ಕಾರವಾರ ಮೂಲದ ವ್ಯಕ್ತಿಯೊಬ್ಬರು ತನಗೆ ನಿಫಾ ವೈರಸ್ ತಗುಲಿರಬಹುದೆಂಬ ಶಂಕೆಯಲ್ಲಿ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖರಾಗಿದ್ದಾರೆ. ಜೊತೆಗೆ ಪರೀಕ್ಷೆಗೆ ಒಳಗಾಗಿರುವ ವ್ಯಕ್ತಿಗೆ ಈ ತನಕ ಯಾವುದೇ ತೀವ್ರ ತರವಾದ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.
ಇದೀಗ ಸೋಂಕು ಶಂಕಿತ ವ್ಯಕ್ತಿಯ ಗಂಟಲು ದ್ರವವನ್ನು ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ರವಾನಿಸಲಾಗಿದ್ದು, ಬುಧವಾರ ಅಂದ್ರೆ ನಾಳೆ ವರದಿ ಬರುವ ಸಾಧ್ಯತೆಗಳಿದೆ. ಇನ್ನು ಇವರಿಗೆ ಸೋಂಕು ತಗುಲಿರುವ ಸಾಧ್ಯತೆಗಳು ತೀರಾ ವಿರಳ ಎನ್ನಲಾಗಿದ್ದು, ನಿಫಾ ಸೋಂಕಿನ ಪರೀಕ್ಷೆಗೊಳಗಾದ ವ್ಯಕ್ತಿ ಕೇರಳಕ್ಕೆ ಹೋದ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಮಾತ್ರವಲ್ಲದೆ ಕೇರಳದಿಂದ ಬಂದ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕವನ್ನೂ ಹೊಂದಿಲ್ಲ, ಕೇವಲ ಗೋವಾಗೆ ಮಾತ್ರ ಅವರು ಭೇಟಿ ನೀಡಿದ್ದಾರೆ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.
Discussion about this post