ಗದಗ : ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ. ನುರಿತ ತಜ್ಞರಿದ್ದಾರೆ, ಉತ್ತಮ ಚಿಕಿತ್ಸೆಗೆ ಕೊರತೆಯಿಲ್ಲ. ಹಾಗಿದ್ದರೂ ರೋಗಿಗಳು ಮಾತ್ರ ಜಿಮ್ಸ್ ಅಂದ್ರೆ ಹೌಹಾರುತ್ತಾರೆ. ಇದಕ್ಕೆ ಕಾರಣ ಅಲ್ಲಿ ಮಂಗಗಳ ಕಾರು ಬಾರು.
ಹೌದು ಜಿಮ್ಸ್ ಆಸ್ಪತ್ರೆಗೆ ನುಗ್ಗುತ್ತಿರುವ ಮಂಗಗಳು ಇದೀಗ ಆಸ್ಪತ್ರೆ ಸಿಬ್ಬಂದಿ, ವೈದ್ಯರು, ರೋಗಿಗಳ ಆತಂಕಕ್ಕೆ ಕಾರಣವಾಗಿದೆ. ಹೊತ್ತಲ್ಲ ಹೊತ್ತಲ್ಲಿ ವಾರ್ಡ್ ಗೆ ದಾಳಿ ಇಡುವ ಮಂಗಗಳು ಅಲ್ಲಿರುವ ಆಹಾರಗಳನ್ನು ಹೊತ್ತೊಯ್ಯುತ್ತವೆ. ಇನ್ನು ವಾನರರ ಹಿಂಡು ಕಂಡು ಮಕ್ಕಳು, ಬಾಣಂತಿಯರು ಭಯಪಡುವಂತಾಗಿದೆ. ಎಲ್ಲಿ ಯಾವಾಗ ಯಾರಿಗೆ ಏನು ಮಾಡುತ್ತದೋ ಅನ್ನುವ ಭಯ ಇವರಿಗೆ.
ಕೆಲ ತಿಂಗಳ ಹಿಂದೆ ಹೀಗೆ ದಾಳಿ ಮಾಡಿದ್ದ ಮಂಗ ಮಗುವಿನ ಹೊಟ್ಟೆಗೆ ಗಾಯ ಮಾಡಿತ್ತು. ಇನ್ನು ಮಂಗಗಳ ಕಾಟದ ಬಗ್ಗೆ ದೂರು ಕೊಟ್ಟು ಸಾರ್ವಜನಿಕರು ಸುಸ್ತಾಗಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯೂ ಮಂಗಗಳನ್ನು ಓಡಿಸಿ ಸುಸ್ತಾಗಿದೆ. ಆಹಾರದ ಕೊರತೆಯ ಕಾರಣ ಆಸ್ಪತ್ರೆಯಲ್ಲಿ ಆಹಾರ ಸಿಗುತ್ತದೆ ಅನ್ನುವ ಕಾರಣದಿಂದ ಮಂಗಗಳು ದಾಳಿ ಮಾಡುತ್ತವೆ. ಇದಕ್ಕೆ ಆಹಾರದ ವ್ಯವಸ್ಥೆ ಮಾಡದ ಹೊರತು ಇವುಗಳ ದಾಳಿ ನಿಲ್ಲುವ ಲಕ್ಷಣಗಳಿಲ್ಲ.
Discussion about this post