ನವದೆಹಲಿ : ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಮಹಿಳಾ ನ್ಯಾಯಮೂರ್ತಿಗಳು ಏಕಕಾಲಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹಿರಿಯ ವಕೀಲರೊಬ್ಬರು ಸೇರಿ 9 ಮಂದಿಯನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಅದರಂತೆ ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾದ 9 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 9 ಜನರ ಪೈಕಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದು, ಇದರಲ್ಲಿ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರೂ ಸೇರಿದ್ದಾರೆ. ಬಿ.ವಿ ನಾಗರತ್ನ ಅವರ ತಂದೆಯೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯಶ್ರೀನಿವಾಸ ಓಕಾ, ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್, ಸಿಕ್ಕಿಂ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರಕುಮಾರ್ ಮಹೇಶ್ವರಿ, ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಿಮಾಕೋಹ್ಲಿ, ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್, ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್, ಗುಜರಾತ್ ಹೈಕೋರ್ಟ್ನ ಬೇಲಾ ಎಂ. ತ್ರಿವೇದಿ ಮತ್ತು ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ ನಾಗರತ್ನ ಅವರು 1987ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ್ದರು. 2008ರ ಫೆಬ್ರವರಿ 18 ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2010ರ ಫೆಬ್ರವರಿ 7ರಂದು ಖಾಯಂ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿದ್ದರು.
ಹಿಮಾ ಕೊಹ್ಲಿ ನವದೆಹಲಿ ಮೂಲದವರಾಗಿದ್ದು, 2006ರ ಮೇ 2019ರಂದು ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2007ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು 2021ರ ಜನವರಿಯಲ್ಲಿ ತೆಲಂಗಾಣ ಹೈಕೋರ್ಟ್ ನ ಪ್ರಥಮ ಹಾಗೂ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದರು.
ಬೇಲಾ ತ್ರಿವೇದಿಯವರು 2011ರ ಫೆಬ್ರವರಿ 17ರಂದು ಗುಜರಾತ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡು, 2011ರಲ್ಲಿ ರಾಜಸ್ಥಾನ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವರ್ಗಾವಣೆಯಾದರು. 2016ರಲ್ಲಿ ಗುಜರಾತ್ ಹೈಕೋರ್ಟ್ ಖಾಯಂ ನ್ಯಾಯಮೂರ್ತಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದರು.
Discussion about this post