ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಕಾಲದಲ್ಲಿ ಇಬ್ಬರೇ ಜೊತೆ ಸೇರಿ ಪಕ್ಷ ಕಟ್ಟಿದ್ದರು. ಇವರಿಬ್ಬರ ಗೆಳೆತನವನ್ನು ನೋಡಿದವರು ಇದಪ್ಪ ಅಂದಿದ್ದರು. ಆದರೆ ಯಾವಾಗ ಇಬ್ಬರೂ ಅಧಿಕಾರ ಅನುಭವಿಸಿದರೋ ಆತ್ಮೀಯರ ನಡುವೆ ಕಿರಿಕ್ ಶುರುವಾಗಿತ್ತು.
ಅದರಲ್ಲೂ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೋದ ಸಂದರ್ಭದಲ್ಲಿ ಈಶ್ವರಪ್ಪ ಮಾಡಿದ ಟೀಕೆಗಳನ್ನು ಕೇಳಿದವರು ಈಶ್ವರಪ್ಪ, ಯಡಿಯೂರಪ್ಪ ಸಂಬಂಧ ಹಳಸಿತು ಅಂದಿದ್ದರು. ಆದರೆ ಯಡಿಯೂರಪ್ಪ ಮರಳಿ ಪಕ್ಷಕ್ಕೆ ಬಂದ ಮೇಲೆ ಎಲ್ಲವೂ ಸರಿಯಾಗಿತ್ತು.
ಮೊನ್ನೆ ಮೊನ್ನೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜಭವನಕ್ಕೆ ತೆರಳಿದ ಈಶ್ವರಪ್ಪ, ಮುಖ್ಯಮಂತ್ರಿ ವಿರುದ್ಧವೇ ದೂರು ಸಲ್ಲಿಸಿದ್ದರು. ಅಷ್ಟು ಮಾತ್ರವಲ್ಲದೆ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಲೇಬೇಕು ಎಂದು ಪರೋಕ್ಷವಾಗಿ ಹೇಳಿಕೆಗಳನ್ನೂ ಕೊಟ್ಟಿದ್ದರು. ತಮ್ಮ ಗಮನಕ್ಕೆ ತಾರದೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೇರವಾಗಿ ಹಣ ಬಿಡುಗಡೆ ಮಾಡಿದ್ದಾರೆ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಇಬ್ಬರೂ ವೇದಿಕೆ ಹಂಚಿಕೊಂಡರೂ, ಪರಸ್ಪರ ಮುಖಕೊಟ್ಟು ಮಾತನಾಡುತ್ತಿರಲಿಲ್ಲ.
ಈ ನಡುವೆ ಇದೀಗ ಶಿವಮೊಗ್ಗ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರನ್ನು ವಿನೋಬ ನಗರದ ನಿವಾಸದಲ್ಲಿ ಭೇಟಿ ಮಾಡಿರುವ ಜಿಲ್ಲಾ ಉಸ್ತುವಾರಿ ಈಶ್ವರಪ್ಪ ಉಪಹಾರ ಸೇವಿಸಿದ್ದಾರೆ. ಈ ವೇಳೆ ಮಹತ್ವದ ವಿಚಾರಗಳ ಕುರಿತಂತೆ ಚರ್ಚೆಯೂ ನಡೆದಿದೆ ಎನ್ನಲಾಗಿದೆ. ರಾಜ್ಯ ಪ್ರವಾಸ, ಮಂತ್ರಿ ಸ್ಥಾನದ ಗೊಂದಲ ಬಗ್ಗೆಯೂ ಇಬ್ಬರೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಭೇಟಿಯ ಬಳಿಕ ಮಾತನಾಡಿದ ಈಶ್ವರಪ್ಪ, ಭೇಟಿಯಲ್ಲಿ ವಿಶೇಷವಿಲ್ಲ. ನಾವಿಬ್ಬರೂ ಅಣ್ಣತಮ್ಮಂದಿರಂತೆ ಅವರ ಮನೆಗೆ ನಾವು ಹೋಗುತ್ತೇವೆ, ಅವರು ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲಾ ಒಂದೇ ಅಂದಿದ್ದಾರೆ.
Discussion about this post