ಬೆಂಗಳೂರು : ತಾಲಿಬಾನ್ ರಾಕ್ಷಸರ ಕೈಗೆ ಸಿಕ್ಕಿರುವ ಅಫ್ಘಾನಿಸ್ತಾನದ ಸಿಲುಕಿರುವ ಭಾರತೀಯ ರಕ್ಷಣೆಗೆ ಈಗಾಗಲೇ ಕೇಂದ್ರ ಸರ್ಕಾರ ಮುಂದಾಗಿದ್ದು, ಹಲವರನ್ನು ಭಾರತಕ್ಕೆ ಕರೆ ತರಲಾಗಿದೆ. ಈ ನಡುವೆ ಮತ್ತಷ್ಟು ಭಾರತೀಯರು ಉಗ್ರರು ಕೈ ವಶ ಮಾಡಿಕೊಂಡಿರುವ ನೆಲದಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡದ ಅನೇಕ ಮಂದಿ ಇದ್ದಾರೆ ಎನ್ನಲಾಗಿದೆ.
ಹೀಗಾಗಿ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಈ ಹಿಂದೆಯೇ ಮುಂದಾಗಬೇಕಾಗಿತ್ತು. ಈ ಸಂಬಂಧ ನೋಡಲ್ ಅಧಿಕಾರಿಯನ್ನು ನೇಮಿಸಿ ದೆಹಲಿಗೆ ಕಳುಹಿಸಿಕೊಡಬೇಕಾಗಿತ್ತು. ಜೊತೆಗೆ ಕರ್ನಾಟಕದಿಂದ ಅಫ್ಘನ್ ಗೆ ತೆರಳಿರುವವರ ಮಾಹಿತಿಯನ್ನು ಕೂಡಾ ರಾಜ್ಯ ಸರ್ಕಾರ ಕಲೆ ಹಾಕಬೇಕಾಗಿತ್ತು.ಆದರೆ ಅದ್ಯಾಕೋ ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಡವಿದಂತೆ ಕಾಣುತ್ತಿದೆ.
ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಶಾಸಕ ಯುಟಿ ಖಾದರ್ ಕನ್ನಡಿಗರ ರಕ್ಷಣೆ ಸಲುವಾಗಿ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿದ್ದರು. ಜೊತೆಗೆ ಅವರನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಫ್ಗಾನಿಸ್ತಾನದ ಸಂಘರ್ಷಭರಿತ ಪರಿಸ್ಥಿತಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಮಾಡಲು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೊರೋನಾ ಮಾರ್ಗಸೂಚನೆ ಪಾಲನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿಗಳನ್ನ ಉಸ್ತುವಾರಿಗಳನ್ನಾಗಿ ವಲಯವಾರು ನಿಯೋಜನೆ ಮಾಡಿತ್ತು.ಈ ಪೈಕಿ ಶಿವಮೊಗ್ಗ ದಾವಣಗೆರೆ ಉಸ್ತುವಾರಿಯನ್ನು ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ವಹಿಸಲಾಗಿತ್ತು.
ಆದರೆ ಆಗ ಕಾರಿನಿಂದ ಇಳಿಯದೆ ಇವರು ಕೆಲಸ ಮಾಡಿದ್ದರು ಅನ್ನುವ ಟೀಕೆಯನ್ನು ಎದುರಿಸಿದ್ದರು. ಜೊತೆಗೆ ಸರ್ಕಾರಿ ಐಬಿಯಲ್ಲಿ ಉಳಿದುಕೊಳ್ಳುವ ಬದಲು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಕನ್ನಡಿಗರ ರಕ್ಷಣೆಯ ವಿಚಾರದಲ್ಲಿ ಹೀಗೆ ನಿರ್ಲಕ್ಷ್ಯವಾಗದಿರಲಿ ಅನ್ನುವುದು ಎಲ್ಲರ ಕಳಕಳಿ.
Discussion about this post