ಬೆಂಗಳೂರು : ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಹೊಸದಾಗಿ ಬೊಮ್ಮಾಯಿ ಸಂಪುಟಕ್ಕೆ ಸೇರಿದ ಸಚಿವರು ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದಾರೆ. ಆದರೆ ಈಗಾಗಲೇ ಮಂತ್ರಿ ಭಾಗ್ಯ ಅನುಭವಿಸಿದವರು ಈ ಸರಳತೆ ಅನ್ನುವ ಪದದ ಕಡೆ ತಲೆ ಹಾಕಲೇ ಇಲ್ಲ. ಅವರಿಗೂ ಗೊತ್ತಿದೆ ನುಡಿದಂತೆ ನಡೆಯುವುದು ಕಷ್ಟ. ಹೀಗಾಗಿ ಸುಮ್ನೆ ಸರಳತೆ ಘೋಷಣೆ ಮಾಡಿ ಸಿಕ್ಕಿ ಹಾಕಿಕೊಳ್ಳುವುದ್ಯಾಕೆ, ಸಿಕ್ಕ ಭಾಗ್ಯವನ್ನು ಅನುಭವಿಸೋದು ಒಳ್ಳೆಯದ್ದಲ್ವ ಅಂತಾ. ಇಲ್ಲವಾದ್ರೆ ಮೋದಿ ಹೆಸರಲ್ಲಿ ಗೆದ್ದು ಮಂದಿ ಮೋದಿಯವರ ಒಂದಿಷ್ಟು ಆದರ್ಶಗಳನ್ನು ಅಳವಡಿಸಿಕೊಳ್ಳುತ್ತಿದ್ರು.
ಮಂತ್ರಿಗಳ ಮನವಿಯನ್ನು ಆದೇಶ ರೂಪಕ್ಕಿಳಿಸಿದ ಸಿಎಂ
ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆಯ ಸಚಿವರಾಗ ಕಾರ್ಕಳ ಸುನಿಲ್ ಕುಮಾರ್, ಪುಸ್ತಕವನ್ನು ಉಡುಗೊರೆಯಾಗಿ ಕೊಡಿ, ನನ್ನ ಕ್ಷೇತ್ರದ ಗ್ರಂಥಾಲಯಗಳಿಗೆ ಅನುಕೂಲವಾಗುತ್ತದೆ ಅಂದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಸುನಿಲ್ ಕುಮಾರ್ ಜನರಲ್ಲಿ ಮಾಡಿದ ಮನವಿಯನ್ನು ಆದೇಶ ರೂಪಕ್ಕೆ ತಂದರು. ಜೊತೆಗೆ ಗೌರವ ವಂದನೆ ಸಲ್ಲಿಸುವ ಬ್ರಿಟಿಷರ ಕಾಲದ ಪದ್ಧತಿಯನ್ನೂ ಪಕ್ಕಕ್ಕೆ ಸರಿಸಿ ಒಂದೊಳ್ಳೆ ಕೆಲಸ ಮಾಡಿದರು.
ಈ ನಡುವೆ ನೂತನ ಗೃಹ ಸಚಿವ ಅಗರ ಜ್ಞಾನೇಂದ್ರ ನನಗೆ ಝೀರೋ ಟ್ರಾಪಿಕ್ ಬೇಡ, ಹಿಂದೊಂದು, ಮುಂದೊಂದು ವಾಹನವೂ ಬೇಡ ಅನ್ನುವ ಮೂಲಕ ಮಂತ್ರಿಯಂದ್ರೆ ಹೀಗಿರಬೇಕಪ್ಪ ಅನ್ನಿಸಿಕೊಂಡರು. ಇದೀಗ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನನಗೂ ಝೀರೋ ಟ್ರಾಫಿಕ್ ಬೇಡ ಅನ್ನುವ ಮೂಲಕ ಗೃಹ ಸಚಿವರ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಝೀರೋ ಟ್ರಾಫಿಕ್ ಅನ್ನು ರದ್ದುಗೊಳಿಸುವ ಕುರಿತಂತೆ ಪೊಲೀಸ್ ಇಲಾಖೆ ಆದೇಶವನ್ನೂ ಕೂಡಾ ಹೊರಡಿಸಿದೆ. ಹಾಗಂತ ಮುಖ್ಯಮಂತ್ರಿಗಳಿಗೆ ಸಿಗ್ನಲ್ ಫ್ರೀ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಜನ ಸಾಮಾನ್ಯರ ಟ್ರಾಫಿಕ್ ನಲ್ಲಿ ಅವರು ಕಾಯಬೇಕಾಗಿಲ್ಲ.
ಜಿಲ್ಲೆಗಳಲ್ಲಿ ರದ್ದಾಗುವುದಿಲ್ಲ ಝೀರೋ ಟ್ರಾಫಿಕ್
ಆದರೆ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ಅನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳ ಭದ್ರತೆ ಸಾಕಷ್ಟು ಮುಖ್ಯ ವಿಷಯ ಆಗಿರುವುದರಿಂದ ಈ ಬಗ್ಗೆ ಗೃಹ ಇಲಾಖೆ ನಿರ್ಲಕ್ಷ್ಯ ವಹಿಸುವಂತಿಲ್ಲ.
ಹಾಗಾದ್ರೆ ಮಂತ್ರಿಗಳು, ಮುಖ್ಯಮಂತ್ರಿಗಳು ಹೀಗೆ ಸರಳತೆ ಘೋಷಣೆ ಮಾಡುವ ಮೂಲಕ ಶಾಕ್ ಕೊಡುತ್ತಿರುವುದ್ಯಾಕೆ ಅಂದ್ರೆ, ಕಾಂಗ್ರೆಸ್ ಅನ್ನು ಮಣಿಸುವ ಎಲ್ಲಾ ತಂತ್ರಗಳು ಅಡಗಿದೆ. ಅರಗ ಹಾಗೂ ಸುನಿಲ್ ಕುಮಾರ್ ಅವರು ತಮಗಿರುವ ಕಿರು ಅವಧಿಯಲ್ಲಿ ಸಾಧನೆ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ. ರಾಜ್ಯ ನೆನಪಿಟ್ಟುಕೊಳ್ಳುವ ಕೆಲಸ ಮಾಡಲೇಬೇಕು ಎಂದು ಅವರ ಪಣ ತೊಟ್ಟಿದ್ದಾರೆ.
ಇನ್ನು ಮುಖ್ಯಮಂತ್ರಿಗಳ ವಿಷಯಕ್ಕೆ ಬಂದ್ರೆ ಮುಂದಿನ ಚುನಾವಣೆಯನ್ನು ಬೊಮ್ಮಾಯಿಯವರ ನೇತೃತ್ವದಲ್ಲೇ ಎದುರಿಸಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಈ ಹಿಂದೆ ಕೇಳಿ ಬಂದಿರುವ ಆರೋಪಗಳನ್ನು ತೊಡೆದು ಹಾಕುವ ಕೆಲಸವನ್ನು ಬೊಮ್ಮಾಯಿಯವರು ಮಾಡಬೇಕಿದೆ. ಜೊತೆಗೆ ಮುಂದಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರೋಧಿ ಅಲೆ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳಿದ್ದು, ಆಡಳಿತದಲ್ಲಿ ಆಗಿರುವ ಲೋಪಗಳನ್ನು ಡಿಕೆಶಿ ಟೀಂ ಜನತೆಯ ಮುಂದಿಡಲಿದೆ. ಇದರ ವಿರುದ್ಧ ಬಿಜೆಪಿಯಲ್ಲಿ ಅಸ್ತ್ರವಿಲ್ಲ. ಹೀಗಾಗಿಯೇ ಬೊಮ್ಮಾಯಿವರ ಸರಳತೆಯ ಘೋಷಣೆಗಳನ್ನು ಪ್ರಾರಂಭಿಸಿದ್ದಾರೆ. ಆಗ ಸಹಜವಾಗಿಯೇ ಜನ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಹೇಗಿತ್ತು ಆಡಂಭರ ಅನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ಒಂದು ವೇಳೆ ಜನ ಮರೆತರೆ ಬಿಜೆಪಿ ಅದನ್ನು ನೆನಪಿಸುತ್ತದೆ.
ಇನ್ನು ಹೇಳಿ ಕೇಳಿ ಕುಮಾರಸ್ವಾಮಿಯವರು ಜನರ ಕೈಗೆ ಸಿಗುವ ಜನಪ್ರತಿನಿಧಿ, ಜೊತೆಗೆ ಅವರು ಸಹಜವಾಗಿಯೇ ಸರಳ ಜೀವಿ ಅನ್ನುವುದು ಜನರಿಗೂ ಗೊತ್ತಿದೆ. ಈ ಎಲ್ಲಾ ಕಾರಣಗಳಿಂದ ಇದರ ಮುನ್ಸೂಚನೆ ಅನ್ನುವಂತೆ ಬಸವರಾಜ್ ಬೊಮ್ಮಾಯಿವರು ನಾನು ನಾಡಿನ ಸೇವಕ ಅನ್ನುವ ಘೋಷಣೆಯೊದನ್ನು ಬಿಟ್ಟಿದ್ದಾರೆ. ನರೇಂದ್ರ ಮೋದಿಯವರ ಪ್ರದಾನ ಸೇವಕ ಶಬ್ಧದಿಂದ ಪ್ರೇರಣೆ ಪಡೆದ ಪದವೇ ನಾಡಿನ ಸೇವಕ.
ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಪ್ರಾರಂಭಿಸಿರುವ ಸರಳತೆ ಹಾದಿ ಜನರಿಗೆ ಹಿಡಿಸುವುದರಲ್ಲಿ ಅನುಮಾನವಿಲ್ಲ. ಆದರೆ ಅದನ್ನು ಅವರ ಸಂಪುಟದ ಸಹೋದ್ಯಗಿಗಳು ಎಷ್ಟರ ಮಟ್ಟಿಗೆ ಅನುಸರಿಸುತ್ತಾರೆ ಅನ್ನುವುದೇ ಪ್ರಶ್ನೆ.
Discussion about this post