ಮಂಗಳೂರು : ಭ್ರಷ್ಟಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡಿರುವ ನೂತನ ಸಿಎಂ ಬಸವರಾಜ ಬೊಮ್ಮಾಯಿ ಮೋದಿಯ ಹಾದಿಯಲ್ಲಿ ನಡೆದು ತೋರಿಸುತ್ತೇನೆ ಎಂದು ಈಗಾಗಲೇ ಭರವಸೆ ಕೊಟ್ಟಿದ್ದಾರೆ. ನನ್ನ ಮಾತುಗಳು ಕೇವಲ ಕೃತಿಯಲ್ಲಿ ಇರುವುದಿಲ್ಲ ಎಂದು ಸಾಬೀತು ಮಾಡಲು ಹೊರಟಿರುವ ಅವರು, ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ, ಹೂ ಗುಚ್ಛಗಳಿಗೆ ನಿರ್ಬಂಧ ವಿಧಿಸಿದ್ದಾರೆ.
ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಹಾನರ್ ಸಲ್ಲಿಕೆ ನಿಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಪೊಲೀಸ್ ಸಮಾರಂಭಗಳಲ್ಲಿ ಮಾತ್ರ ಗೌರವ ವಂದನೆ ಸಲ್ಲಿಕೆಯಾಗಲಿದೆ. ಗಾರ್ಡ್ ಆಫ್ ಹಾನರ್ ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿರುವ ಅವರು, ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ನಡುವೆ ಮಂಗಳೂರಿನಲ್ಲಿ ಗಾರ್ಡ್ ಆಫ್ ಹಾನರ್ ಗೆ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಅದನ್ನು ಸ್ವೀಕರಿಸಿದ್ದಾರೆ.
ಹಾಗೇ ನೋಡಿದರೆ ಬೊಮ್ಮಾಯಿಯವರ ನಡೆ ಮೆಚ್ಚುವಂತಹುದು. ಅವರ ತಂದೆಯ ಹಾದಿಯಲ್ಲಿ ಅವರು ಕೂಡಾ ನಡೆಯುತ್ತಿದ್ದಾರೆ. ಜೊತೆಗೆ ವಿಐಪಿ ಸಂಸ್ಕೃತಿ ಬ್ರೇಕ್ ಹಾಕುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಜನತೆಗೆ ಹತ್ತಿರವಾಗುತ್ತಿದ್ದಾರೆ.
ಈ ನಡುವೆ ನರೇಂದ್ರ ಮೋದಿಯವರು ತನ್ನ ಪ್ರಧಾನ ಸೇವಕ ಎಂದು ಕರೆಸಿಕೊಂಡಿದ್ದಾರೆ, ಹಾಗೇ ಬೊಮ್ಮಾಯಿವರು ನಾನು ನಾಡಿನ ಸೇವಕ ಎಂದು ಹೇಳಿದ್ದು, ನಾನು ಹೋಗುವ ಕಡೆಗಳಲ್ಲಿ ನನ್ನ ಕಟೌಟ್, ಹೋರ್ಡಿಂಗ್ ಹಾಕಬೇಡಿ ಎಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Discussion about this post