ಬೆಂಗಳೂರು : ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ಹೀಗೆ ವಿವಿಧ ಅಕ್ರಮಗಳ ಆರೋಪದ ಹಿನ್ನಲೆಯಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ್ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿಯನ್ನು ಅಂತ್ಯಗೊಳಿಸಿದ್ದಾರೆ.
ಇನ್ನು ದಾಳಿ ಮುಗಿಯುತ್ತಿದ್ದಂತೆ ಮನೆಗೆ ಹೊರಗೆ ಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಜಮೀರ್, ಮನೆ ಎಲ್ಲಾ ಹುಡುಕಾಡಿದರು ಏನೂ ಸಿಗಲಿಲ್ಲ ಅವರಿಗೆ. ಅವರು ಎನೆಲ್ಲಾ ನಿರೀಕ್ಷೆ ಇಟ್ಟುಕೊಂಡು ಬಂದಿದ್ದಾರೋ, ಆ ನಿರೀಕ್ಷೆ ಈಡೇರಿಲ್ಲ. ಯಾವಾಗ ಮನೆ ಕಟ್ಟಿದ್ದು, ಯಾವಾಗ ಖರೀದಿಸಿದ್ದು, ಖರ್ಚು ವೆಚ್ಚದ ವಿವರಗಳನ್ನು ಕೇಳಿದ್ದಾರೆ. ಆ ಎಲ್ಲಾ ಮಾಹಿತಿಗಳನ್ನು ಕೊಟ್ಟಿದ್ದೇನೆ. ಅಧಿಕಾರಿಗಳು ಮನೆಯಿಂದ ಹೋಗುವಾಗ ಡೆಲ್ಲಿಗೆ ಕರೆಯುತ್ತೇವೆ, ಬರಬೇಕು ಅಂದಿದ್ದಾರೆ. ಹಾಗಂತ ಯಾವುದೇ ನೊಟೀಸ್ ಕೊಟ್ಟಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದ್ದಾರೆ.
ಈ ದಾಳಿ ಐಎಂಎ ವಿಚಾರದಲ್ಲಿ ನಡೆದಿಲ್ಲ. 2006ರಲ್ಲಿ ನಾನು ಈ ಜಾಗ ಖರೀದಿಸಿದ್ದು, 7 ವರ್ಷಗಳ ಬಳಿಕ ಮನೆ ಕಟ್ಟಿಸಿದ್ದೇನೆ. ನಾನು ಯಾರ ಮನೆಯಲ್ಲೂ ಲೂಟಿ ಮಾಡಿಲ್ಲ. ದುಡಿದು ಸಂಪಾದನೆ ಮಾಡಿದ್ದೇನೆ. ಅ ಎಲ್ಲಾದಕ್ಕೂ ಲೆಕ್ಕವಿದೆ ಎಂದು ಜಮೀರ್ ಹೇಳಿದ್ದಾರೆ. ಇನ್ನು ತನ್ನ ಬೆಂಬಲಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಜಮೀರ್ ಸ್ಪೆಷಲ್ ಧನ್ಯವಾದ ತಿಳಿಸಿದ್ದಾರೆ.
Discussion about this post