ಬೆಂಗಳೂರು : ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಹೊರಟಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಐಟಿ ಇಲಾಖೆ ಶಾಕ್ ಕೊಟ್ಟಿದೆ. ಇಂದು ಬೆಳಗ್ಗೆ ಬಂಬೂ ಬಜಾರ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ತೆರಿಗೆ ವ್ಯತ್ಯಾಸ ಕುರಿತಂತೆ ಜಮೀರ್ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಜಮೀರ್ ಅವರಿಗೆ ಸೇರಿದ್ದ ಒಟ್ಟು 6 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇದರಲ್ಲಿ ಮೂರು ಮನೆ ಹಾಗೂ ಮೂರು ಕಚೇರಿ ಸೇರಿದೆ. ಬಂಬೂ ಬಜಾರ್ ಮನೆ, ಯುಬಿ ಸಿಟಿಯ ಫ್ಲ್ಯಾಟ್ ಮತ್ತು ಸದಾಶಿವನಗರದ ಫ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿದೆ. ಸದಾಶಿವನಗರದ ಫ್ಲ್ಯಾಟ್ ಇತ್ತೀಚೆಗೆ ಕುಮಾರಸ್ವಾಮಿ ಮತ್ತು ಜಮೀರ್ ನಡುವಿನ ಕಿತ್ತಾಟಕ್ಕೂ ಕಾರಣವಾಗಿತ್ತು
ಇನ್ನು ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮತ್ತು ಇವರ ಇತರ ವ್ಯವಹಾರಗಳ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ದಾನಶೂರ ಕರ್ಣನಾಗಿದ್ದ ಜಮೀರ್, ಸಿಕ್ಕಾಪಟ್ಟೆ ನಗದು ಹಂಚುತ್ತಿದ್ದರು. ಜೊತೆಗೆ ಪಾದರಾಯನಪುರದ ಪುಂಡರ ಬೆನ್ನಿಗೂ ನಿಂತು ಜಮೀರ್ ಸುದ್ದಿಯಾಗಿದ್ದರು.
ಅಷ್ಟೇ ಅಲ್ಲದೆ ಮೈಸೂರು ಅರಮನೆ ನಾಚಿಸುವಂತೆ ಅರೇಬಿಕ್ ಶೈಲಿಯಲ್ಲೇ ಮನೆ ಕಟ್ಟಿಸಿದ್ದ ಜಮೀರ್ ತಾಕತ್ತು ಪ್ರದರ್ಶಿಸಿದ್ದರು. ಈ ಮನೆಗೆ 80 ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ ಅನ್ನಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಈ ಮನೆ ನಿರ್ಮಾಣವೇ ಐಟಿ ದಾಳಿಗೆ ಕಾರಣವಾಗಿರಬಹುದು ಅನ್ನಲಾಗಿದೆ. ಜೊತೆಗೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಅವರ ಬಳಿ ಇತ್ತು ಎಂದು ಗೊತ್ತಾಗಿದೆ.
Discussion about this post