ಬೆಂಗಳೂರು : ರಾಜ್ಯದ ಅನೇಕ ಭಾಗಗಳಲ್ಲಿ ಅಬ್ಬರಿಸಿದ ಮಳೆಯಿಂದ ನೆರೆ ಪರಿಸ್ಥಿತಿ ಉದ್ಭವಿಸಿದ್ದು, ಅನೇಕ ಜಿಲ್ಲೆಗಳಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಬೆಳೆದು ನಿಂತ ಪೈರು ನೀರು ಪಾಲಾಗಿದ್ದು, ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಈ ನಡುವೆ ನೆರೆ ಪರಿಹಾರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ವಿಧಾನಸೌಧದಲ್ಲಿ ವಿಶೇಷ ಸಭೆ ನಡೆಸಿದ್ದಾರೆ. ದೆಹಲಿಗೆ ತೆರಳುವ ಮುನ್ನ ನಡೆದ ಸಭೆಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿ, ರಾಜ್ಯ ಮುಖ್ಯ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ತುರ್ತು ಕಾಮಗಾರಿ ಸಲುವಾಗಿ 660 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು. ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದಂತೆ ಯಡಿಯೂರಪ್ಪ ಸರ್ಕಾರದಲ್ಲಿ ಆದೇಶಿಸಿದಂತೆ ಸಂಪೂರ್ಣ ಮನೆ ಹಾನಿಯಾದವರಿಗೆ 5 ಲಕ್ಷ, ಭಾಗಶ ಮನೆ ಹಾಳಾದವರಿಗೆ 3 ಲಕ್ಷ ಹಾಗೂ ಅಲ್ಪ ಮನೆ ಹಾನಿಯಾದವರಿಗೆ 50 ಸಾವಿರ ಹಣ ನೀಡುವಂತೆ ಸೂಚಿಸಲಾಗಿದೆ.
ಇನ್ನು ಮಳೆ ಕಡಿಮೆಯಾದ ತಕ್ಷಣ ಸಂಪರ್ಕ ರಸ್ತೆ ಹಾಗೂ ಸೇತುವೆ ಕಾಮಗಾರಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮನೆ ಸಮೀಕ್ಷೆ ಹಾಗೂ ಬೆಳೆ ನಾಶ ಸಮೀಕ್ಷೆಯನ್ನು ಇನ್ನು 15 ದಿನದಲ್ಲಿ ಪೂರ್ಣಗೊಳಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Discussion about this post