ಕಾಬೂಲ್ : ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ 2001ರಲ್ಲಿ ನಿಯೋಜಿಸಲಾಗಿದ್ದ ಅಮೆರಿಕಾ ಸೇನೆಗಳು ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರರು ಅಟ್ಟಹಾಸಗೈಯಲಾರಂಭಿಸಿದ್ದಾರೆ. ದೇಶದ ಒಂದೊಂದೇ ಭಾಗವನ್ನು ಕೈ ವಶ ಮಾಡಿಕೊಳ್ಳುತ್ತಿರುವ ಅವರು ಇದೀಗ ಕಂದಹಾರ್ ನಗರವನ್ನು ಪ್ರವೇಶಿಸಿದ್ದಾರೆ.ಮಾತ್ರವಲ್ಲದೆ ಇರಾನ್ ಜೊತೆಗಿನ ವ್ಯಾಪರ ನಡೆಸುವ ಚೆಕ್ ಪೋಸ್ಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ಉಗ್ರರನ್ನು ಹಿಮ್ಮೆಟ್ಟಿಸಲು ಆಫ್ಘನ್ ಸೇನೆ ಪ್ರಯತ್ನಿಸುತ್ತಿದೆಯಾದರೂ ಅದು ನಿರೀಕ್ಷಿತ ಯಶಸ್ಸು ನೀಡಿಲ್ಲ. ಮತ್ತೊಂದು ಕಡೆ ಅಮೆರಿಕಾ ಸೇನೆಗಳು ಜಾಗ ಖಾಲಿ ಮಾಡುವ ಮುನ್ನ ಶಸ್ತ್ರಾಸ್ತ್ರಗಳನ್ನು ಇಲ್ಲೇ ಬಿಟ್ಟು ತೆರಳಿವೆ. ಅವೆಲ್ಲವೂ ಕೂಡಾ ಉಗ್ರರ ಕೈಗೆ ಸಿಕ್ಕಿದ್ದು, ಉಗ್ರರನ್ನು ಹಿಮ್ಮೆಟ್ಟಿಸಲು ಬಂದ ಅಮೆರಿಕಾವೇ ತಾಲಿಬಾನ್ ಉಗ್ರರಿಗೆ ಪರೋಕ್ಷ ಸಹಕಾರ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಅದೆಷ್ಟೋ ಶಸ್ತ್ರಾಸ್ತ್ರಗಳ ಬಾಕ್ಸ್ ಗಳನ್ನು ಅಮೆರಿಕಾದ ಸೈನಿಕರು ತೆರೆದೇ ಇಲ್ಲ. ಈಗ ಅವೆಲ್ಲವೂ ತಾಲಿಬಾನ್ ಉಗ್ರರಿಗೆ ವರವಾಗಿ ಪರಿಣಮಿಸಿದೆ.
2001ರಲ್ಲಿ ವಿಶ್ವವಾಣಿಜ್ಯ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಕೆಂಡಾಮಂಡಲವಾಗಿದ್ದ ಅಮೆರಿಕಾ ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಆಘ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿತ್ತು. ಆದರೆ 20 ವರ್ಷಗಳ ಕಾಲ ಹೋರಾಟ ನಡೆಸಿದರೂ ಉಗ್ರರನ್ನು ಸದೆ ಬಡಿಯಲು ಅಮೆರಿಕಾ ಸೇನೆಗೆ ಸಾಧ್ಯವಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿಯುವ ನಿರ್ಧಾರಕ್ಕೆ ಅಮೆರಿಕಾ ಬಂದಿದೆ. ಮೇ 1 ರಿಂದ ಅಮೆರಿಕಾ ಸೇನೆ ಹಿಂದಕ್ಕೆ ಸರಿಯುತ್ತಿದ್ದಂತೆ ತಾಲಿಬಾನಿ ಉಗ್ರರು ದೇಶದ ಬಹುಭಾಗವನ್ನು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿ ನೋಡಿದರೆ ಇಡೀ ದೇಶ ತಾಲಿಬಾನ್ ವಶವಾಗುವ ಸಾಧ್ಯತೆಗಳಿದೆ.
ಈ ನಡುವೆ ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾದ ಹಿನ್ನಲೆಯಲ್ಲಿ ಕಂದಬಾರ್ ನಲ್ಲಿದ್ದ ದೂತವಾಸದದ ಸಿಬ್ಬಂದಿಯನ್ನು ಭಾರತ ತೆರವು ಮಾಡಿದ್ದು, ತವರಿಗೆ ಕರೆಸಿಕೊಳ್ಳಲಾಗಿದೆ. ಶನಿವಾರ ಕಂದಹಾರ್ ಗೆ ತೆರಳಿದ್ದ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಎಲ್ಲಾ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕರೆ ತಂದಿದೆ.
Discussion about this post