ಉಡುಪಿ : ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಸಚಿವ ಆರ್ ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ” ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಕೊಡವೂರು ಗ್ರಾಮದ ಸರ್ವೆ ನಂ 53/6 ರಲ್ಲಿ 0.67 ಸೆಂಟ್ಸ್ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ, ಪಳ್ಳಿ ಜಿಡ್ಡ, ಕೊಡವೂರು ಇವರ ಹೆಸರಿಗೆ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಕೆ ರಘುಪತಿ ಭಟ್ ಅವರು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ ಸ್ಥಳೀಯ ಸ್ಥಿತಿಗತಿಯನ್ನು ಮನವರಿಕೆ ಮಾಡಿ ಈ ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಅದನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.
ಅದರಂತೆ, ಇದೀಗ “ಕಂದಾಯ ಸಚಿವರ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರು ಸ್ಥಳೀಯ ಸ್ಥಿತಿಗತಿಗಳ ವರದಿಯನ್ನು ಸಲ್ಲಿಸಿರುವಂತೆ ಈ ಜಾಗವನ್ನು ಮರಳಿ ಸರಕಾರದ ವಶಕ್ಕೆ ಪಡೆದು ಜೂನ್ 22ರಂದು ಸರ್ಕಾರದ ಹೆಸರಿಗೆ ಅಧಿಸೂಚನೆ ಹೊರಡಿಸಲಾಗಿದೆ” ಎಂದು ಶಾಸಕ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2018 ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಈ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ ಇವರ ಹೆಸರಿಗೆ ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಎಂದು ಆರೋಪಿಸಿ ಸ್ಥಳೀಯರು ಸೇರಿದಂತೆ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು.
ಸರ್ಕಾರದ ನಿರ್ಧಾರಕ್ಕೆ ಮಸೀದಿ ಪರ ಕಾನೂನು ಹೋರಾಟ ಮಾಡುತ್ತಿರುವ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ಪ್ರತಿಕ್ರಿಯಿಸಿದ್ದು, 2020ರಲ್ಲಿ ಬಿಜೆಪಿ ಸರ್ಕಾರ ಇರುವ ಸಂದರ್ಭದಲ್ಲಿಯೇ ಗೆಜೆಟ್ ನೋಟಿಫಿಕೇಶನ್ ಆಗಿದೆ. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯಿಂದ ಕಾನೂನಾತ್ಮಕ ಪ್ರಕ್ರಿಯೆ ನಡೆಸಿಯೇ ನೋಟಿಫಿಕೇಶನ್ ಮಾಡಲಾಗಿದೆ.
ಇದೀಗ ಮಸೀದಿಗೆ ಸಂಬಂಧಪಡವರು ಕೊಟ್ಟ ದೂರಿನಂತೆ ಸರ್ಕಾರ ಭೂಮಿ ವಾಪಾಸ್ ಪಡೆಯುವ ತೀರ್ಮಾನ ಕೈಗೊಂಡಿದೆ. ಇದಕ್ಕೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ ಅಂದಿದ್ದಾರೆ.
Discussion about this post