ಬೆಂಗಳೂರು : ನಿಮ್ಮಲ್ಲಿ ಒಂದು ರೂಪಾಯಿ ನಾಣ್ಯ ಇದೆಯೇ, 5 ರೂಪಾಯಿ ನೋಟು ಇದೆಯೇ ನೀವು ಕೋಟ್ಯಧಿಪತಿ ಅನ್ನುವ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಹೀಗೆ ಕೋಟಿ ಆಸೆಗೆ ಬಿದ್ದವರನ್ನು ಲೂಟಿ ಮಾಡೋ ಗ್ಯಾಂಗ್ ಕೂಡಾ ಹುಟ್ಟಿಕೊಂಡಿದೆ.
ಹೀಗೆ ಸ್ವತಂತ್ರ ಭಾರತದ ಮೊದಲ ವರ್ಷದ 1 ರೂಪಾಯಿ ನಾಣ್ಯ ಮಾರಲು ಹೋದ ಶಿಕ್ಷಕಿಯೊಬ್ಬರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸರ್ಜಾಪುರ ರಸ್ತೆ ವಿಪ್ರೋ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಕೋಟಿ ಆಸೆಗೆ ಬಿದ್ದು ಲಕ್ಷ ಕಳೆದುಕೊಂಡ ಶಿಕ್ಷಕಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
1947ರ ಒಂದು ರೂಪಾಯಿ ನಾಣ್ಯವನ್ನು ಮಾರಾಟ ಮಾಡುವುದಾಗಿ OLX ನಲ್ಲಿ ಶಿಕ್ಷಕಿ ಜಾಹೀರಾತು ಕೊಟ್ಟಿದ್ದರು. ಜೊತೆಗೆ ಗ್ರಾಹಕರ ಸಲುವಾಗಿ ಮೊಬೈಲ್ ನಂಬರ್ ಬೇರೆ ಕೊಟ್ಟಿದ್ದರು. ಇದನ್ನು ನೋಡಿದ ಖದೀಮನೊಬ್ಬ 1 ಕೋಟಿ ಕೊಡ್ತೀನಿ ನಾಣ್ಯ ಬೇಕು ಅಂದಿದ್ದಾನೆ, ಕೋಟಿ ಸಿಗೋ ಖುಷಿಗೆ ಬಿದ್ದ ಶಿಕ್ಷಕಿ ಬ್ಯಾಂಕ್ ವಿವರಗಳನ್ನು ಕೊಟ್ಟಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿ ಹಣ ವರ್ಗಾವಣೆ ಮಾಡಿರುವ ಎಡಿಟೆಡ್ ಸ್ಕ್ರೀನ್ ಶಾಟ್ ಅನ್ನು ಶಿಕ್ಷಕಿಗೆ ಅಪರಿಚತ ವ್ಯಕ್ತಿ ಕಳುಹಿಸಿದ್ದಾನೆ. ಅದೆಷ್ಟು ಹೊತ್ತು ಕಳೆದರೂ ಕಾಸು ಮಾತ್ರ ಬರಲಿಲ್ಲ.ಖಾತೆ ಹಣ ಜಮೆಯಾಗಿಲ್ಲ ಎಂದು ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹೇಳಿದ್ರೆ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಪುಂಗಿದ್ದಾನೆ.
ಇದನ್ನು ನಂಬಿದ ಶಿಕ್ಷಕಿ ಅವನಿಗೆ ಹಣ ಕೊಟ್ಟಿದ್ದಾರೆ. ಇದಾದ ಬಳಿಕ ಆರ್ ಬಿಐ ಶುಲ್ಕ, ಅದು ಇದು ಅಂತಾ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದಾನೆ. ಆದರೆ ಆ ಕಡೆಯಿಂದ ಕೋಟಿ ಬರುವ ಲಕ್ಷಣಗಳಿಲ್ಲ.
ಕೊನೆಗೆ ಆ ವ್ಯಕ್ತಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಷ್ಟು ಹೊತ್ತಿಗೆ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾದ ಶಿಕ್ಷಕಿ ವೈಟ್ ಫೀಲ್ಡ್ CEN ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post