ಬೆಂಗಳೂರು : ಮುಂದಿನ ಎರಡು ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪ ಘೋಷಿಸಿದ್ದರು.ಎರಡು ದಿನಗಳ ಹಿಂದೆ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಸ್ಪಷ್ಟಪಡಿಸಿದ್ದರು.
ಈ ಎರಡು ಹೇಳಿಕೆಗಳ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಚಟುವಟಿಕೆ ಜೋರಾಗಿದೆ. ಬಂಡಾಯ ತಣ್ಣಗಾಯ್ತು ಅನ್ನುವಷ್ಟರಲ್ಲಿ ಯಡಿಯೂರಪ್ಪ ವಿರೋಧಿ ಬಣ ಚುರುಕಾಗಿದ್ದು ದೆಹಲಿ ಯಾತ್ರೆ ಪ್ರಾರಂಭಗೊಂಡಿದೆ.
ಈ ನಡುವೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಶುಕ್ರವಾರ ತಡರಾತ್ರಿ ದೆಹಲಿಗೆ ಭೇಟಿ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಸಿ.ಪಿ. ಯೋಗೇಶ್ವರ್ ಜೊತೆಗೆ ಬೆಲ್ಲದ್ ದೆಹಲಿಗೆ ಭೇಟಿ ಕೊಟ್ಟಿದ್ದರು. ಇದೀಗ ಮತ್ತೆ ಅವರು ಭೇಟಿ ಕೊಟ್ಟಿರುವುದನ್ನು ನೋಡಿದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನ ಫಲಿಸುತ್ತಿದೆ ಅನ್ನಿಸುತ್ತಿದೆ.
ಬೆಲ್ಲದ್ ಜೊತೆಗೆ ಕೆಲ ಶಾಸಕರು ಕೂಡಾ ದೆಹಲಿಗೆ ಬಂದಿದ್ದಾರೆ ಎನ್ನಲಾಗಿದೆ.ಇವೆರೆಲ್ಲರೂ ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ್ದು, ತಮ್ಮ ಅಹವಾಲು ಸಲ್ಲಿಸಲು ಕಾದು ಕುಳಿತಿದ್ದಾರೆ.
ಈ ನಡುವೆ ಬೆಲ್ಲದ್ ಭೇಟಿಗೂ ಯಡಿಯೂರಪ್ಪ ಕುರ್ಚಿಗೂ ಸಂಬಂಧವಿಲ್ಲ ಬದಲಾಗಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆದರೆ ಎಲ್ಲರ ಅಭಿಪ್ರಾಯ ಏನು ಎಂದು ಗೊತ್ತಾಗುತ್ತದೆ. ಶಾಸಕರ ಸಂಕಷ್ಟಗಳು ಕೂಡಾ ಅರಿವಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸಿಗುತ್ತಿರುವ ಮನ್ನಣೆ ಬಿಜೆಪಿ ಶಾಸಕರಿಗೆ ಸಿಗುತ್ತಿಲ್ಲ. ಹೀಗಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅನ್ನುವುದು ಬೆಲ್ಲದ್ ಬಳಗದ ಆಗ್ರಹವಾಗಿದೆ.
ಕೊರೋನಾ ನೆಪ ಹೇಳಿ ಶಾಸಕಾಂಗ ಪಕ್ಷದ ಸಭೆ ನಡೆಯುವುದನ್ನು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ನೆಪಕ್ಕೆ ಸೊಪ್ಪು ಹಾಕಬಾರದು ಎಂದು ಅರವಿಂದ ಬೆಲ್ಲದ್ ವರಿಷ್ಟರ ಮುಂದೆ ಮನವಿ ಮಾಡಲಿದ್ದಾರಂತೆ.
ಆದರೆ ದೆಹಲಿ ಭೇಟಿ ಬಗ್ಗೆ ಬೆಲ್ಲದ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದೇನೆ. ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನಾಯಕರ ಭೇಟಿಗಾಗಿ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.
Discussion about this post