ಬೆಂಗಳೂರು : ಕರ್ನಾಟಕದಲ್ಲಿ ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಹಂತದ ನಾಯಕರನ್ನು ಕರ್ನಾಟಕದಲ್ಲಿ ಬೆಳೆಸದ ಕರ್ಮವನ್ನು ಬಿಜೆಪಿ ಇಂದು ಅನುಭವಿಸುತ್ತಿದೆ. ಪ್ರತೀ ಸಲ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ.
ಇದೀಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಕೂಡಾ ಬಯಸಿದೆ. ಕೊರೋನಾ ನಿರ್ವಹಣೆಯಲ್ಲಿ ವೈಫಲ್ಯ, ಬಿಜೆಪಿಯ ಅಲಿಖಿತ ನಿಯಮದಂತೆ 75 ಕಳೆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ. ಹೀಗೆ ಹತ್ತು ಹಲವು ಕಾರಣಗಳಿಂದ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲೇ ಬೇಕಾಗಿದೆ. ಹೊಸ ನಾಯಕರನ್ನು ಕರ್ನಾಟಕದಲ್ಲಿ ಹುಟ್ಟು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಬಿಜೆಪಿಗಿದೆ. ಹಾಗೇ ಮಾಡಬೇಕಾದರೆ ಯಡಿಯೂರಪ್ಪ ಅವರು ಸಲಹಾ ಮಂಡಳಿ ಸದಸ್ಯರಾಗಬೇಕು.
ಒಂದು ವೇಳೆ ಯಡಿಯೂರಪ್ಪ ಅವರೇ ಅಧಿಕಾರದಿಂದ ಕೆಳಗಿಳಿದರೆ ಬಿಜೆಪಿಗೆ ಸಮಸ್ಯೆ ಇಲ್ಲ. ನಾನು ನಾನಾಗಿಯೇ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ. ಯುವಕರಿಗೆ ಹಾದಿ ಮಾಡಿಕೊಡುವುದು ನನ್ನ ಉದ್ದೇಶ ಎಂದು ಯಡಿಯೂರಪ್ಪ ಸಾರಿದರೆ ಹೈಕಮಾಂಡ್ ಹಾದಿ ಸುಗಮ. ಆದರೆ ಯಡಿಯೂರಪ್ಪ ಅದಕ್ಕೆ ಸಿದ್ದರಿಲ್ಲ. ಹೈಕಮಾಂಡ್ ಬಯಸಿದರೆ, ಹೈಕಮಾಂಡ್ ನನ್ನ ಕೆಳಗಿಳಿಸಿದರೆ, ಹೈಕಮಾಂಡ್ ಗೆ ನಾನು ಸಾಕು ಅನ್ನಿಸಿದರೆ ನಾನು ಸಿಎಂ ಸ್ಥಾನ ತ್ಯಜಿಸುತ್ತೇನೆ ಅನ್ನೋ ಮೂಲಕ ನಾನು ಕುರ್ಚಿ ಬಿಡಲು ಸಿದ್ದರಿಲ್ಲ ಅನ್ನುವ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ.
ಮೂಲಗಳ ಪ್ರಕಾರ ಈ ಹಿಂದೆಯೇ ಯಡಿಯೂರಪ್ಪ ಅವರನ್ನು ಬದಲಿಸಲು ಹೈಕಮಾಂಡ್ ಹೊರಟ ಸಂದರ್ಭದಲ್ಲಿ, ಯಡಿಯೂರಪ್ಪ ಅದಕ್ಕೆ ಸಮ್ಮತಿಸಿದ್ದರು. ಆದರೆ ಬಿಎಸ್ವೈ ಕಂಡೀಷನ್ ಕೇಳಿದ ವರಿಷ್ಠರೇ ಸುಸ್ತಾಗಿದ್ದರು. ಸಿಎಂ ಸ್ಥಾನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬರಬೇಕು, ಪುತ್ರ ವಿಜಯೇಂದ್ರ ಡಿಸಿಎಂ ಆಗಬೇಕು ಅನ್ನುವುದು ಬಿಎಸ್ವೈ ಬೇಡಿಕೆಯಾಗಿತ್ತು ಎನ್ನಲಾಗಿದೆ. ಭೂ ಹಗರಣ ಆರೋಪಕ್ಕೆ ಸಿಲುಕಿದ ಸಂದರ್ಭದಲ್ಲಿ ಡಿವಿ ಸದಾನಂದ ಗೌಡ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದರು ಯಡಿಯೂರಪ್ಪ. ಅದರಿಂದ ಆದ ಅನಾಹುತಗಳನ್ನು ಹೈಕಮಾಂಡ್ ಇನ್ನೂ ಮರೆತಿಲ್ಲ.
ಇದೀಗ ಮತ್ತೆ ಯಡಿಯೂರಪ್ಪ ಬದಲಾವಣೆ ಚರ್ಚೆ ಪ್ರಾರಂಭವಾಗಿದೆ. ಈ ಬಾರಿಯೂ ಯಡಿಯೂರಪ್ಪ ಹೈಕಮಾಂಡ್ ಗಿಂತ ನಾನು ಒಂದು ಹೆಜ್ಜೆ ಮೇಲೆ ಅನ್ನುವುದನ್ನು ತೋರಿಸಿದ್ದಾರೆ.
ಇನ್ನು ಒತ್ತಾಯದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಲಿದೆ ಅನ್ನುವುದು ಕೂಡಾ ಹೈಕಮಾಂಡ್ ಗೆ ಗೊತ್ತಿದೆ.
Discussion about this post