ಬೆಂಗಳೂರು : ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಲು ನಡೆಸಿದ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದ್ದಂತೆ, ಯಡಿಯೂರಪ್ಪ ಬಣ ಇದೀಗ ಎದ್ದು ನಿಂತಿದೆ. ಬಂಡಾಯ ಶಾಸಕರ ದೆಹಲಿ ಪ್ರವಾಸಕ್ಕೆ ಬೆಲೆ ಸಿಗದಿರುವ ಹಿನ್ನಲೆಯಲ್ಲಿ ಇದೀಗ ವಾಗ್ದಾಳಿಗಳು ಪ್ರಾರಂಭಗೊಂಡಿದೆ. ಯಡಿಯೂರಪ್ಪ ಹೇಳಬೇಕಾಗಿರುವ ಮಾತುಗಳನ್ನು ಅವರ ಬೆಂಬಲಿಗರೇ ಇದೀಗ ಹೇಳಲಾರಂಭಿಸಿದ್ದಾರೆ.
ಸಿಪಿ ಯೋಗೀಶ್ವರ್ ವಿರುದ್ಧ ಹರಿಹಾಯ್ದಿರುವ ಶಾಸಕ ರಾಜು ಗೌಡ, ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಬೇಕು, ಕೆಂಪುಗೂಟದ ಕಾರು ಬೇಕು, ಆದರೆ ಯಡಿಯೂರಪ್ಪ ಬೇಡ್ವ ಎಂದು ಪ್ರಶ್ನಿಸಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದೆಹಲಿಗೆ ಹೋಗುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ ರಾಜು ಗೌಡ, ಸಣ್ಣತನದ ರಾಜಕೀಯ ಮಾಡಲು ನಿಮಗೆ ಹೇಗೆ ಮನಸ್ಸು ಬಂತು. ಯೋಗೀಶ್ವರ್ ಅವರನ್ನು ಮಂತ್ರಿ ಮಾಡಬೇಡಿ ಎಂದು ಮನವಿ ಮಾಡಿದೆವು. ಬ್ಲ್ಯಾಕ್ ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಅಂದರೂ ಯಡಿಯೂರಪ್ಪ ಕೇಳಲಿಲ್ಲ. ಸೋತವರನ್ನು ಮಂತ್ರಿ ಮಾಡಿದ್ದಾರೆ. ಹೀಗಾಗಿ ಪಕ್ಷ ವಿರೋಧ ಚಟುವಟಿಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಮೇಲೆ ನಂಬಿಕೆ ಇಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆಗ್ರಹಿಸಿರುವ ರಾಜೂ ಗೌಡ, ಇಂತವರಿಂದಲೇ ಬಿಜೆಪಿಗೆ ಕೆಟ್ಟ ಹೆಸರು ಅಂದಿದ್ದಾರೆ.
Discussion about this post