ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರುದ್ರ ನರ್ತನಗೈಯುತ್ತಿರುವ ನಡುವೆ ಬಿಜೆಪಿಯ ಪಡಸಾಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದೆ. ಲಾಕ್ ಡೌನ್ ತೆರವು ಬೆನ್ನಲ್ಲೇ ರಾಜಕೀಯ ಬಿರುಗಾಳಿ ಬೀಸುವುದು ಸ್ಪಷ್ಟವಾಗಿದೆ.
ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕೆಲಸ ಜಾರಿಯಲ್ಲಿರುವ ಸಂದರ್ಭದಲ್ಲೇ ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೆ ಚಟುವಟಿಕೆಯೊಂದು ಸದ್ದಿಲ್ಲದೆ ನಡೆಯುತ್ತಿದೆ.
ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರೆ ಅನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಕಳೆದ 6 ತಿಂಗಳಿನಿಂದ ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸುವ ಪ್ರಯತ್ನ ನಡೆದಿತ್ತು. ಆದರೆ ಕೊರೋನಾ ಕಾರಣದಿಂದ ಈ ಕಸರತ್ತಿನ ವೇಗಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಕಸರತ್ತು ಮಾತ್ರ ನಿಂತಿರಲಿಲ್ಲ. ಒಂದು ವೇಳೆ ಸುರೇಶ್ ಅಂಗಡಿ ಅವರು ಬದುಕಿರುತ್ತಿದ್ರೆ ಇಷ್ಟು ಹೊತ್ತಿಗೆ ಯಡಿಯೂರಪ್ಪ ಸ್ಥಾನದಲ್ಲಿ ಅಂಗಡಿ ಕೂತಿರುತ್ತಿದ್ರು.
ಆದರೆ ಈಗ ಬಿಜೆಪಿ ಸರ್ಕಾರ ಬರಲು ಕಾರಣರಾದವರ ಪೈಕಿ ಒಬ್ಬರಾದ ಸಿಪಿ ಯೋಗೀಶ್ವರ್ ಡಿಸಿಎಂ ಪಟ್ಟದಲ್ಲಿ ಕೂರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಡಿಸಿಎಂ ಆಸೆ ತೋರಿಸಿದ್ದ ಯಡಿಯೂರಪ್ಪ ಕೈ ಕೊಟ್ಟರು ಅನ್ನುವ ಆಕ್ರೋಶ ಸಿಪಿವೈ ಅವರದ್ದು. ಹೀಗಾಗಿ ಅವರ ನೇತೃತ್ವದಲ್ಲೇ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಸರ್ಕಸ್ ಮಾಡುತ್ತಿದ್ದಾರೆ.
ಹಾಗಾದ್ರೆ ಯಡಿಯೂರಪ್ಪ ಸ್ಥಾನಕ್ಕೆ ಯಾರು ಬರ್ತಾರೆ ಅನ್ನುವ ಪ್ರಶ್ನೆ ಕೇಳಿದ್ರೆ 5 ಹೆಸರುಗಳು ರೇಸ್ ನಲ್ಲಿದೆ. ಮೊದಲ ಹೆಸರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎರಡನೇ ಹೆಸರು ಡಿಸಿಎಂ ಡಾ.ಅಶ್ವಥ್ ನಾರಾಯಣ್, ಮೂರನೇ ಹೆಸರು ಶಾಸಕ ಅರವಿಂದ ಬೆಲ್ಲದ್, ನಾಲ್ಕನೇ ಹೆಸರು ಸಚಿವ ಮುರುಗೇಶ್ ನಿರಾಣಿ, ಐದನೇ ಹೆಸರು ಶಾಸಕ ಶಿವಕುಮಾರ್ ಉದಾಸಿ ಅವರದ್ದು.
ಆದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಇನ್ನೂ ಹಸಿರು ನಿಶಾನೆ ತೋರಿಲ್ಲ. ಒಂದು ವೇಳೆ ತೋರಿದರೆ ಯಡಿಯೂರಪ್ಪ ಕುರ್ಚಿ ಬಿಡ್ತಾರ ಅನ್ನುವುದು ಈಗಿರುವ ಪ್ರಶ್ನೆ.
Discussion about this post