ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತರಬೇಕು ಅನ್ನುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿದೆ. ಒಂದ್ಸಲ ಕೊರೋನಾ ನಿಯಂತ್ರಣಕ್ಕೆ ಬರೋ ತನಕ ಅದ್ದೂರಿ ಕಾರ್ಯಕ್ರಮ ಮಾಡಬೇಡಿ ಎಂದು ಈಗಾಗಲೇ ಆದೇಶಿಸಲಾಗಿದೆ. ಜೊತೆಗೆ ನಿಗದಿಯಾದ ಮದುವೆಯನ್ನು ನಿಗದಿತ ಸಂಖ್ಯೆಯ ಜನರನ್ನು ಸೇರಿಸಿ ನಡೆಸಿ ಎಂದು ಸೂಚಿಸಲಾಗಿದೆ.
ಹಾಗಿದ್ದರೂ ಜನ ಮಾತ್ರ ಅದ್ದೂರಿ ಮದುವೆ ಸೇರಿ ಅನೇಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿಲ್ಲ. ಹಳ್ಳಿಗಳನ್ನು ಕೊರೋನಾ ಸುನಾಮಿ ಮರಣ ಮಾರುತ ಬೀಸುತ್ತಿದ್ದರೂ ಜನ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ ಅಂದ್ರೆ ಮೋದಿ, ಯಡಿಯೂರಪ್ಪ ಅವರನ್ನು ಬೈಯುತ್ತಾರೆ.
ಈ ನಡುವೆ ಚಿಕ್ಕಮಗಳೂರು ಕಡೂರು ಕರಿಕಲ್ಲಳ್ಳಿ ಗ್ರಾಮದಲ್ಲಿ ಅದ್ಧೂರಿ ಮದುವೆಯನ್ನು ಆಯೋಜಿಸಲಾಗಿತ್ತು. 10 ಜನರಿಗೆ ಮಾತ್ರ ಅವಕಾಶ ಅನ್ನುವ ನಿಬಂಧನೆಯೊಂದಿಗೆ ಈ ಮದುವೆಗೆ ಅನುಮತಿ ನೀಡಲಾಗಿತ್ತು. ಆದರೆ ಯಾವಾಗ ಮದುವೆ ಮನೆಯಲ್ಲಿ 400 ಜನರನ್ನು ಸೇರಿಸಿದ್ದಾರೆ ಅನ್ನುವ ಸುದ್ದಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಲುಪಿತೋ, ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದರೆ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ವರ ಮನೆಯಂಗಳದಲ್ಲಿ ಚಪ್ಪರ ಹಾಕಿರುತ್ತಾರೆ ಅಂದುಕೊಂಡ್ರೆ, ಅರ್ಧ ಗ್ರಾಮಕ್ಕೆ ಶಾಮೀಯಾನ ಹಾಕಲಾಗಿತ್ತು. ಇನ್ನು ಅಧಿಕಾರಿಗಳು ಬರುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಸೇರಿದ್ದ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರೊಂದಿಗೆ ವೇದಿಕೆಯಲ್ಲಿದ್ದ ವರ ವಧುವನ್ನು ಬಿಟ್ಟು ಕಾಲ್ಕಿತ್ತಿದ್ದಾನೆ. ಯಾರಪ್ಪ ಮದುವೆ ಗಂಡು ಎಂದು ಅಧಿಕಾರಿಗಳು ಹುಡುಕಿದ್ರೆ, ವರ ಪರಾರಿಯಾಗಿದ್ದ.
ಈಗಾಗಲೇ ಚಿಕ್ಕಮಗಳೂರಿನ ಅನೇಕ ಹಳ್ಳಿಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ. ಸೋಂಕು ನಿಯಂತ್ರಣ ಸಲುವಾಗಿ ಅನೇಕ ಹಳ್ಳಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗಿದ್ದರೂ ಜನ ಎಚ್ಚೆತ್ತುಕೊಳ್ಳದೆ ಹೋದ್ರೆ ಕೊರೋನಾ ನಿಯಂತ್ರಣಕ್ಕೆ ಬರುವುದಾದರೂ ಹೇಗೆ…?
Discussion about this post