ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿಗಳ ನಡೆ ಇದೀಗ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸಿಲ್ಲ ಅನ್ನುವ ಕಾರಣಕ್ಕೆ ಪೆಟ್ರೋಲ್ ಬಂಕ್ ಹುಡುಗನೊಬ್ಬನ ಮೇಲೆ ಗರಂ ಆಗಿದ್ದರು. ಈ ವೇಳೆ ಆತನನ್ನು ಪೊಲೀಸರು ಕೊರಳಪಟ್ಟಿಗೆ ಕೈ ಹಾಕಿ ಕರೆದೊಯ್ಯುವಂತೆ ಮಾಡಿದ್ದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನಿಯಮ ಉಲ್ಲಂಘಿಸಿ ಸಾವಿರ ಕಾರ್ಯಕ್ರಮ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷರ ತರವಾಡು ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಜಿಲ್ಲಾಧಿಕಾರಿಗಳು ಸೈಲೆಂಟ್ ಆಗಿದ್ದರು.
ದಾವಣಗೆರೆಯಲ್ಲಿ ಮಾಸ್ಕ್ ಧರಿಸಿಲ್ಲ ಅನ್ನುವ ಕಾರಣಕ್ಕೆ ಎಸ್ಪಿ ಹಿರಿಯರೊಬ್ಬರ ಕೆನ್ನೆಗೆ ಬಾರಿಸಿದ್ದರು. ವಯಸ್ಸಿಗಾದರೂ ಮರ್ಯಾದೆ ಕೊಡುವ ಸೌಜನ್ಯ ಎಸ್ಪಿಗೆ ಇರಲಿಲ್ಲ. ಇನ್ನು ಉಡುಪಿ ಜಿಲ್ಲಾಧಿಕಾರಿಗಳು ಬಸ್ ನಲ್ಲಿ ಜನ ತುಂಬಿಸಿದ್ದಾರೆ ಅನ್ನುವ ಕಾರಣಕ್ಕೆ ವಿದ್ಯಾರ್ಥಿಗಳನ್ನು ಮಾರ್ಗ ಮಧ್ಯೆ ಇಳಿಸಿ ಹೋಗಿದ್ದರು. ಬಳಿಕ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದ್ದರು.
ಆದರೆ ಇದೀಗ ಅದೇ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಫೋಟೋ ಹರಿದಾಡುತ್ತಿದ್ದು, ಉಡುಪಿ ಎಎಸ್ಪಿ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಜಿಲ್ಲಾಧಿಕಾರಿಗಳು ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಮಾಸ್ಕ್ ಇಲ್ಲದೆ ಫೋಟೋ ಪೋಸು ಕೊಟ್ಟಿರುವ ಫೋಟೋ ಇದಾಗಿದೆ.
ಇದು ಇಂದು ನಡೆದ ಕಾರ್ಯಕ್ರಮವೇ ಅಥವಾ ಎಡಿಟ್ ಮಾಡಿರುವ ಪೋಟೋನಾ ಅನ್ನುವ ಕುರಿತಂತೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೊಡಬೇಕಾಗಿದೆ. ಒಂದು ವೇಳೆ ಜಿಲ್ಲಾಧಿಕಾರಿಗಳು ತಪ್ಪು ಮಾಡಿದ್ರೆ ಕ್ಷಮಿಸಲು ಸಾಧ್ಯವಿಲ್ಲ. ಹಾಗಂತೆ ಎಡಿಟ್ ಮಾಡಿದ ಫೋಟೋ ಆಗಿದ್ರೆ ಎಡಿಟ್ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು.
ಇನ್ನು ಇದೇ ಕಾರ್ಯಕ್ರಮದಲ್ಲೂ ಕೊರೋನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ನಿಗದಿಗಿಂತ ಅಧಿಕ ಜನರಿದ್ದರು, ಸಂಕಷ್ಟ ಕಾಲದಲ್ಲೂ ಹಾಡು ಕುಣಿತವನ್ನು ಆಯೋಜಿಸಲಾಗಿತ್ತು.
Discussion about this post