ಉಡುಪಿ : ಪೊಡವಿಗೊಡೆಯನ ಅಷ್ಟಮಠಗಳು ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಶೀರೂರು ಲಕ್ಷ್ಮೀವರ ತೀರ್ಥರ ಸಾವಿನ ಬಳಿಕ ಒಂದಿಷ್ಟು ವಿವಾದಗಳು ತಣ್ಣಗಾಗಿತ್ತು. ಪೇಜಾವರ ವಿಶ್ವಪ್ರಸನ್ನತೀರ್ಥರು ಕೊಟ್ಟ ಹೇಳಿಕೆಯೊಂದು ಪತ್ರಿಕೆಗಳಲ್ಲಿ ತಪ್ಪಾಗಿ ವರದಿಯಾದ ಕಾರಣ ಅಷ್ಟಮಠ ಮತ್ತೆ ಸದ್ದು ಮಾಡಿತ್ತು.
ಇದೀಗ ಶೀರೂರು ಮಠಕ್ಕೆ ನೂತನ ಪೀಠಾಧಿಪತಿಗಳ ನೇಮಕ ವಿಚಾರ ಮತ್ತೆ ಸುದ್ದಿಯಲ್ಲಿದೆ. ಕೇವಲ ಸುದ್ದಿ ಮಾತ್ರವಲ್ಲ ಚರ್ಚೆಯಲ್ಲಿದೆ. ಈ ಹಿಂದೆ ಫಲಿಮಾರು ಮಠಕ್ಕೂ ಉತ್ತರಾಧಿಕಾರಿ ನೇಮಕವಾಗಿತ್ತು, ಆದರೆ ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ.
ಇದನ್ನೂ ಓದಿ : ಕೊನೆಗೂ ಶಿರೂರು ಮಠಕ್ಕೆ ಪೀಠಾಧಿಪತಿ : ಸೋದೆ ಮಠದ ಶ್ರೀಗಳ ತಾಕತ್ತು ಮೆಚ್ಚಲೇಬೇಕು
ಹೇಳಿ ಕೇಳಿ ಶೀರೂರು ಶ್ರೀಗಳೇ ಸದಾ ಸುದ್ದಿಯಲ್ಲಿದ್ದವರು, ತನ್ನ ಅಂತ್ಯ ಕಾಲದಲ್ಲೂ ವಿವಾದವನ್ನೇ ಮೈಮೇಲೆ ಹೊದ್ದು ಉಸಿರು ಚೆಲ್ಲಿದವರು. ಅಂದ ಮೇಲೆ ನೂತನ ಪೀಠಾಧಿಪತಿಯ ನೇಮಕ ಶೀರೂರು ಮಠದ ಸಂಪ್ರದಾಯ ಅನ್ನುವಂತೆ ಸದ್ದು ಮಾಡುತ್ತಿದೆ. ಶೀರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಕುರಿತಂತೆ ದ್ವಂದ ಮಠವಾಗಿರುವ ಸೋದೆ ಮಠ ಕೈಗೊಂಡಿರುವ ತೀರ್ಮಾನಕ್ಕೆ ದಿವಂಗತ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರು ಕ್ಯಾತೆ ತೆಗೆದಿದ್ದಾರೆ. ಉಡುಪಿ ಮಠದಲ್ಲಿ ಬಾಲ ಸನ್ಯಾಸ ಪದ್ದತಿ ಇಲ್ಲ, ವೇದಾಂತ ಅಧ್ಯಯನ ಪೂರ್ಣವಾದ ಮತ್ತು 21 ವರ್ಷ ಮೇಲ್ಪಟ್ಟ ವಟುವನ್ನೇ ಆಯ್ಕೆ ಮಾಡಬೇಕಿತ್ತು ಎಂದು ವಾದಿಸಿದ್ದರು.
ಈ ನಡುವೆ ಶೀರೂರು ಮಠಕ್ಕೆ ಪೀಠಾಧಿಪತಿ ನೇಮಿಸುವುದಕ್ಕೆ ವಿರೋಧ ವ್ಯಕ್ತವಾಗಿರುವ ಕುರಿತಂತೆ ಕೇಳಿದ ಪ್ರಶ್ನೆಗೆ, ಇದಕ್ಕೆಲ್ಲಾ ಪ್ರತಿಕ್ರಿಯಿಸೋದಿಲ್ಲ ಎಂದು ಹೇಳಿರುವ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಅಷ್ಟಮಠಗಳಲ್ಲಿ ಬಾಲಸನ್ಯಾಸದ ಪದ್ದತಿ ಇಲ್ಲ ಅನ್ನುವ ವಾದವನ್ನು ತಳ್ಳಿ ಹಾಕಿದ್ದಾರೆ. ಅಷ್ಟಮಠಗಳಲ್ಲಿ ಬಾಲಸನ್ಯಾಸದ ಪರಂಪರೆ ಇದೆ, ನಾನೂ 14 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದೇನೆ ಅಂದಿದ್ದಾರೆ.
ಜೊತೆಗೆ ಶೀರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಮುನ್ನ ಈ ವಟುವಿನ ಬಗ್ಗೆ ಅಷ್ಟ ಮಠಾಧೀಶರ ಜೊತೆ ಚರ್ಚೆ ನಡೆಸಿ ಅವರ ಸಮ್ಮತಿಯನ್ನು ಪಡೆಯಲಾಗಿದೆ. 21 ವರ್ಷ ಪೂರ್ಣಗೊಂಡವರಿಗೆ ಮಾತ್ರ ಸನ್ಯಾಸ ಅನ್ನುವ ಕುರಿತಂತೆ ಅಷ್ಟಮಠಗಳಲ್ಲಿ ಯಾವುದೇ ನಿಯಮಗಳಿಲ್ಲ, ಹಾಗಿದ್ದರೂ ಮುಂದಿನ ಉಡುಪಿ ಪರ್ಯಾಯಕ್ಕೆ ಶೀರೂರು ಮಠದ ಅವಕಾಶ ಬರುವ ವೇಳೆಗೆ ನೂಚನ ಪೀಠಾಧಿಪತಿಗಳು ಸೂಕ್ತ ರೀತಿಯ ವೇದ – ವೇದಾಂತ ಪಾಠವನ್ನು ಅಧ್ಯಯನ ನಡೆಸಲಿದ್ದಾರೆ ಅಂದಿದ್ದಾರೆ.
ಇದನ್ನೂ ಓದಿ : ಉಡುಪಿಯ ಅಷ್ಟಮಠದಲ್ಲಿ ಮತ್ತೆ ಶುರುವಾಯ್ತು ಜಗಳ –ಮಠವೆಂದರೆ ಅದೇನೂ ಕುಟುಂಬದ ಆಸ್ತಿಯೇ..?
Discussion about this post