ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಹೊಡೆತ ಬಲವಾಗಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳನ್ನು ಮುಚ್ಚಿ, ಆನ್ ಲೈನ್ ಶಿಕ್ಷಣ ಮತ್ತೆ ಪ್ರಾರಂಭಿಸಿ ಅನ್ನುವ ಒತ್ತಡ ಕೆಲ ಪೋಷಕರಿಂದ ಕೇಳಿ ಬಂದಿದೆ. ಆದರೆ ಕೆಲವು ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಷ್ಟು ದಿನಗಳ ಕಾಲ ಮೊಬೈಲ್ ಕೈಯಲ್ಲಿ ಹಿಡಿದ ಮಕ್ಕಳು ಹಾಳಾಗಿ ಹೋಗಿದ್ದಾರೆ. ಅವರ ಶಿಕ್ಷಣದ ಗುಣಮಟ್ಟವೂ ಕುಸಿದು ಹೋಗಿದೆ. ಹೀಗಾಗಿ ಶಾಲೆ ಮುಚ್ಚಬೇಡಿ ಅಂದಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ CBSE 10 ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿದೆ. ಹೀಗಾಗಿ ರಾಜ್ಯದಲ್ಲೂ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿ ಅನ್ನುವ ಒತ್ತಾಯ ಕೇಳಿ ಬಂದಿದೆ.
ಕಳೆದ ವರ್ಷವೂ ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲೂ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವ ಆಗ್ರಹ ಕೇಳಿ ಬಂದಿತ್ತು. ಆದರೆ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಪರೀಕ್ಷೆ ರದ್ದುಗೊಳಿಸಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆನ್ನಿಗೆ ನಿಂತಿದ್ದರು. ಹೀಗಾಗಿ sslc ಪರೀಕ್ಷೆಯನ್ನು ಸುಸೂತ್ರವಾಗಿ ಮುಗಿಸಲಾಗಿತ್ತು.
ಈ ಬಾರಿ ಮತ್ತೆ ಪರೀಕ್ಷೆಯನ್ನು ರದ್ದುಗೊಳಿಸುವ ಕುರಿತಂತೆ ಪ್ರಾರಂಭವಾಗಿರುವ ಚರ್ಚೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಜೂನ್ 21ಕ್ಕೆ sslc ಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ. ಹೀಗಾಗಿ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಹೀಗಾಗಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಈಗ ಕೈಗೊಳ್ಳಲು ಸಾಧ್ಯವಿಲ್ಲ. ಈಗಿನ ಮಟ್ಟಿಗೆ ನಾವು ಪರೀಕ್ಷೆಯನ್ನು ನಡೆಸುತ್ತೇವೆ. ಪರೀಕ್ಷೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಅಂದಿದ್ದಾರೆ.
Discussion about this post