ರಾಯಚೂರು : ಯಡಿಯೂರಪ್ಪ ವಿರುದ್ಧ ಸದಾ ಕೆಂಡ ಕಾರುತ್ತಿರುವ ಯತ್ನಾಳ್ ಅವರನ್ನು ಕಟ್ಟಿ ಹಾಕಲು ಹೈಕಮಾಂಡ್ ಗೆ ಇನ್ನೂ ಸಾಧ್ಯವಾಗಿಲ್ಲ. ಬೆಳವಣಿಗೆಗಳನ್ನು ನೋಡಿದರೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುವ ಲಕ್ಷಣಗಳಿಲ್ಲ. ಇವತ್ತೂ ಯಡಿಯೂರಪ್ಪ ವಿರುದ್ಧ ಗುಡುಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಮಾತುಗಳು ಯಡಿಯೂರಪ್ಪ ಮೇಲೆ ಪರಿಣಾಮ ಬೀರಿದೆಯೋ ಇಲ್ಲವೋ ಗೊತ್ತಿಲ್ಲ, ಸ್ವಪಕ್ಷೀಯರನ್ನು ಕಂಗೆಡಿಸಿರುವುದಂತು ಸತ್ಯ. ಎಷ್ಟರ ಮಟ್ಟಿಗೆ ಅಂದ್ರೆ ಯತ್ನಾಳ್ ವಿರುದ್ಧ ಮಾತನಾಡಿದ್ರೆ ಎಲ್ಲಿ ಹುಚ್ಚು ಹಿಡಿಯುತ್ತದೋ ಅನ್ನುವ ಭಯ ಶುರುವಾಗಿದೆ.
ಇದಕ್ಕೆ ಸಾಕ್ಷಿ ಅನ್ನುವಂತೆ ರಾಯಚೂರಿನಲ್ಲಿ ಮಾತನಾಡಿರುವ ಶಾಸಕ ರೇಣುಕಾಚಾರ್ಯ, ಅವರ ವಿರುದ್ಧ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಕೇಂದ್ರದ ನಾಯಕರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಯತ್ನಾಳ್ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ.
ಯತ್ನಾಳ್ ಬಗ್ಗೆ ಮಾತನಾಡಿದ್ರೆ ನಾನು ಹುಚ್ಚು, ಅರೆ ಹುಚ್ಚನಾಗುತ್ತೇನೆ. ಹೀಗಾಗಿ ಅವರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ ಎಂದು ಜಾರಿಕೊಂಡಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರೇಣುಕಾರ್ಯ, ಸಿದ್ದರಾಮಯ್ಯ ಆರ್ ಎಸ್ ಎಸ್ ವಿರೋಧಿಯಾಗಿದ್ದಾರೆ. ಅವರಿಗೆ ಸಂಘದ ನೀತಿ ನಿಯಮಗಳು ಗೊತ್ತಿಲ್ಲ.
ಈಶ್ವರಪ್ಪ ಹಾಗೂ ಯತ್ನಾಳ್ ಹಿಂದೆ ಆರ್ ಎಸ್ ಎಸ್ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಆರ್ ಎಸ್ ಎಸ್ ಎಂದಿಗೂ ಒಡೆದು ಅಳುವುದಿಲ್ಲ. ಅದು ಜೋಡಿಸುತ್ತದೆ. ಹಿಂದೂ ಧರ್ಮದ ಏಳಿಗೆಗಾಗಿ ಕೆಲಸ ಮಾಡುತ್ತದೆ. ಸಂಘ ಪರಿವಾರ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ಆದರೆ ಸಿದ್ದರಾಮಯ್ಯ ಅವರಿಗೆ ಇವೆಲ್ಲಾ ಗೊತ್ತಿಲ್ಲ. ವಿನಾ ಕಾರಣ ಅಪಪ್ರಚಾರ ಮಾಡುತ್ತಾರೆ ಎಂದು ದೂರಿದರು.
Discussion about this post