ಬೆಂಗಳೂರು : ದಿನಕ್ಕೆ ಎರಡು ಮೂರು ಬಾರಿ ರೂಲ್ಸ್ ಬದಲಾವಣೆ ಮಾಡುವ ಮೊತ್ತ ಮೊದಲ ಮುಖ್ಯಮಂತ್ರಿ ಅಂದ್ರೆ ಅದು ಯಡಿಯೂರಪ್ಪ ಅನ್ನುವ ಜನರ ಟೀಕೆಗಳಂತೆ ನಡೆದುಕೊಳ್ಳುತ್ತಿದ್ದಾರೆ ನಮ್ಮ ಮುಖ್ಯಮಂತ್ರಿಗಳು. ಕೊರೋನಾ ಪ್ರಾರಂಭದ ದಿನಗಳಲ್ಲಿ ಲಾಕ್ ಡೌನ್ ಘೋಷಿಸಿದಾಗಲೂ ದಿನಕ್ಕೆರೆಡು ಆದೇಶ, ಅದಕ್ಕೆ ನಾಲ್ಕಾರು ಸಲ ತಿದ್ದುಪಡಿಗಳನ್ನು ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸಲಾಗಿತ್ತು.
ಇದೀಗ ಎರಡನೇ ಅಲೆಯ ಪ್ರಾರಂಭದಲ್ಲೂ, ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾದ್ರೆ ಮತ್ತೆ ಆ ಆದೇಶಕ್ಕೊಂದು ತಿದ್ದುಪಡಿ ಮಾಡಿ ಯಡವಟ್ಟು ಮಾಡಿದ್ದಾರೆ.
ತಾಂತ್ರಿಕ ಸಲಹಾ ಸಮಿತಿಯ ಸಲಹೆಯಿಂದೆ ಕೊರೋನಾ ಮಾರ್ಗಸೂಚಿಯನ್ನು ಹೊರಡಿಸಿ, 8 ಜಿಲ್ಲೆಗಳ ಥಿಯೇಟರ್ ನಲ್ಲಿ ಶೇ 50ರಷ್ಟು ಸೀಟು ಭರ್ತಿಗೆ ಅವಕಾಶ, ಜಿಮ್, ಈಜುಕೊಳ ಪೂರ್ತಿ ಬಂದ್ ಹೀಗೆ ಅನೇಕ ಸೂಚನೆಗಳನ್ನು ನೀಡಲಾಗಿತ್ತು.
ಆದರೆ ಈ ಆದೇಶದ ವಿರುದ್ದ ಚಂದನವನ ತಿರುಗಿ ಬಿತ್ತೋ ಯಡಿಯೂರಪ್ಪ ತಣ್ಣಗಾಗಿದ್ದಾರೆ.
ಈ ಆದೇಶದಿಂದ ಯುವರತ್ನ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ಯಾವಾಗ ಪುನೀತ್ ಸಿಎಂ ಮನೆ ಬಾಗಿಲಿಗೆ ಬಂದು ಮನವಿ ಮಾಡಿದರೋ, ಶೇ50ರಷ್ಟು ಆದೇಶವನ್ನು ಮೂರು ದಿನಗಳ ಮಟ್ಟಿಗೆ ರದ್ದುಗೊಳಿಸಲಾಗಿದೆ. ಈ ಮೂಲಕ ಸೋಮವಾರ ತನಕ ಶೇ 100ರಷ್ಟು ಸೀಟುಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.
ಈ ಆದೇಶಕ್ಕೆ ಪುನೀತ್ ಅಲ್ಪ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಆದರೆ ನಾವಂತು ರಾಜ್ಯ ಸರ್ಕಾರ ಈ ನಡೆಯನ್ನು ಸ್ವಾಗತಿಸಲು ಸಾಧ್ಯವಿಲ್ಲ. ಮಾರ್ಗಸೂಚಿ ಹೊರಡಿಸುವ ಮುನ್ನ ಸಾಧಕ ಬಾಧಕಗಳ ಬಗ್ಗೆ ಅರಿವಿರಬೇಕಿತ್ತು. ಅದನ್ನು ಬಿಟ್ಟು ಇಡೀ ಚಿತ್ರರಂಗವನ್ನು ಗೊಂದಲಕ್ಕೆ ಸಿಲುಕಿಸುವ ಅಗತ್ಯವಿರಲಿಲ್ಲ.
Discussion about this post