ಬೆಂಗಳೂರು : ಕೊರೋನಾ ಎರಡನೆ ಅಲೆ ತಡೆಗೆ ನಿಯಮಗಳು ಆದೇಶಗಳಲ್ಲಿ, ಕಾಗದ ಪತ್ರಗಳಲ್ಲಿ ಬಲವಾಗಿದೆ. ಆದರೆ ಅದು ಜಾರಿಯಾಗುತ್ತಿಲ್ಲ ಅನ್ನುವುದು ಸ್ಪಷ್ಟ.
ಆ ಆದೇಶಗಳು ಏನಿದ್ದರೂ ಬಡವರು ಮತ್ತು ಮಧ್ಯಮ ವರ್ಗದ ಮಂದಿಗೆ ಮಾತ್ರ. ವಿಐಪಿಗಳು, ಸೆಲೆಬ್ರೆಟಿಗಳು ಅನ್ನಿಸಿಕೊಂಡವರು ನಿಯಮಗಳನ್ನು ಗಾಳಿಗೆ ತೂರಿದರೆ ಪರವಾಗಿಲ್ಲ ಅನ್ನುವಂತಿದೆ ರಾಜ್ಯ ಸರ್ಕಾರದ ನಿಲುವು.
ಮೊನ್ನೆಯಿಂದ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳೇ ಅದಕ್ಕೆ ಸಾಕ್ಷಿ. ಅದ್ಯಾವ ನಟನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಲಾಗಿತ್ತು ಹೇಳಿ. ಇದೇ ರೀತಿ ಬೇರೆ ಯಾರಾದ್ರೂ ದಿನದ ಕೂಲಿಗಾಗಿ ದುಡಿಯುವ ಮಂದಿ ಮಾಡಿದ್ರೆ ಅಧಿಕಾರಿಗಳ ದಾಳಿ ಹೇಗಿರುತ್ತಿತ್ತು ಎಂದು ಊಹಿಸಿ.
ಇಂದು ಬಿಡುಗಡೆಯಾದ ಯುವರತ್ನ ಸಿನಿಮಾ ಕೂಡಾ ಹೊರತಲ್ಲ. ಈ ಬಗ್ಗೆ ಪತ್ರಕರ್ತ ಆದಿತ್ಯ ಭಾರದ್ವಾಜ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆಕ್ರೋಶವೊಂದನ್ನು ಹೊರ ಹಾಕಿದ್ದಾರೆ.
“ ಇವತ್ತು ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆ ಆಗುತ್ತಿದೆ.
ನಿನ್ನೆ ಬೆಂಗಳೂರಿನಲ್ಲಿ ಸುಮಾರು ೩೦೦೦ ಕೋವಿಡ್-೧೯ ಪ್ರಕರಣಗಳು ದಾಖಲಾಗಿವೆ. ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು ಮೂರು ವಾರಗಳಿಂದ ಹೇಳುತ್ತಲೇ ಬರುತ್ತಿದೆ: ಸಿನಿಮಾ ಥಿಯೇಟರ್ನಲ್ಲಿ ೫೦% occupancyಗೆ ತರಬೇಕು ಎಂದು. ಸದ್ಯ air-conditioned indoor space ಅಲ್ಲಿ ಸರ್ಕಾರವೇ ನಿಯುಕ್ತಿ ಮಾಡಿರುವ ಸಾಮಾಜಿಕ ಅಂತರ ನಿಯಮವನ್ನು ಮುರಿದು ಹೌಸ್ ಫುಲ್ ಶೋ ನಡೆಸುವುದು “threat to public health” ಎಂದು ಸಲಹಾ ಸಮಿತಿ ಹೇಳಿದೆ.
ಆದರೆ ಸದ್ಯ ಸಿನಿಮಾ ಬಿಡುಗಡೆಯಾಗಲಿರುವ ಪುನೀತ್, ಸುದೀಪ್ ಮತ್ತು ವಿಜಯ್ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಅವರ ಸ್ವಾರ್ಥಕ್ಕಾಗಿ ಹೌಸ್ ಫುಲ್ ಶೋ ನಡೆಸುತ್ತಿದ್ದಾರೆ. ಪುನೀತ್ ಅಂತೂ ಜನರನ್ನು ಥಿಯೇಟರ್ ಗಳಿಗೆ ಸೆಳೆಯಲು ರಾಜ್ಯಾದ್ಯಂತ ಟೂರು ಮಾಡಿದ್ದು ಅವರು ಹೋದಲೆಲ್ಲಾ ಸಾವಿರಾರು ಜನ ಸೇರಿ ಈ ಸಭೆಗಳೂ ಕೂಡಾ “threat to public health” ಎನಿಸಿಕೊಂಡಿವೆ. ಈ ಸಭೆಗಳಿಗನ್ನಾ ಕಡಿವಾಣ ಹಾಕಿ ಎಂದರೂ ಸಿಎಂ ಉತ್ಸುಕತೆ ತೋರಿಲ್ಲ.
ಹಿಂದೊಮ್ಮೆ ಕುಡಿತದ ಸಮಸ್ಯೆ ಇಟ್ಟುಕೊಂಡು ಅಣ್ಣಾವ್ರು ಒಂದು ಸಿನಿಮಾ ಮಾಡಿರುತ್ತಾರೆ, ಬಹುಶಃ ಜೀವನ ಚೈತ್ರ ಇರಬೇಕು. ಅದೇ ಸಂದರ್ಭದಲ್ಲಿ ಅಣ್ಣಾವ್ರ ಬೀಗರು ಬಂಗಾರಪ್ಪನವರು ಒಂದು ಡಿಸ್ಟಿಲರಿ ಮಾಡಿದ್ದು ಅದರ ಉದ್ಘಾಟನೆಗೆ ಕರೆದಾಗ ಅಣ್ಣಾವ್ರು ಹೋಗಲಿಲ್ಲ. ನೆನಪಿರಲಿ ಅಣ್ಣಾವ್ರು ಸ್ವತಃ ಈಡಿಗರು.
ಇಂತಹ ಉಜ್ವಲ ಜನಪರ ಪರಂಪರೆಯಿಂದ ಬಂದ ಪುನೀತ್ ಇವತ್ತು ಮಾಡುತ್ತಿರುವುದು ಬೇಜವಾಬ್ದಾರಿತನದ ಜನವಿರೋಧಿ ಕೃತ್ಯ ಎನ್ನದೇ ವಿಧಿಯಿಲ್ಲ.
Discussion about this post