ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ಜಾತ್ರೆಗೆ ಕೊರೋನಾ ಆತಂಕ ಎದುರಾಗಿದೆ. ಕಳೆದ ಬಾರಿ ಕೊರೋನಾ ಕಾರಣದಿಂದ ಸಂಪ್ರದಾಯದಂತೆ ನೆರವೇರಿದ್ದ ಜಾತ್ರೆಯನ್ನು ಈ ಬಾರಿ ಅದ್ದೂರಿಯಿಂದ ನಡೆಸಲು ಚಿಂತಿಸಲಾಗಿತ್ತು.
ಇನ್ನೇನು ಕೊರೋನಾ ಆತಂಕ ದೂರವಾಯ್ತು, ಜಾತ್ರೆಯ ಸಂಭ್ರಮಕ್ಕೆ ಅಡ್ಡಿ ಇಲ್ಲ ಅಂದುಕೊಳ್ಳುವಷ್ಟರಲ್ಲಿ ಎರಡನೇ ಅಲೆಯ ಅಬ್ಬರ ಶುರುವಾಗಿದೆ.
ಕಳೆದ ಬಾರಿಗೆ ಹೋಲಿಸಿದರೆ ಕೊರೋನಾ ಎದುರಿಸುವುದು ಹೇಗೆ ಅನ್ನುವ ಅರಿವು ಇರುವ ಹಿನ್ನಲೆಯಲ್ಲಿ ಈ ಬಾರಿ ಭಕ್ತರ ಜೀವ ರಕ್ಷಣೆಯ ಜೊತೆಗೆ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಜಾತ್ರೆ ನಡೆಸುವ ಕುರಿತಂತೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖವಾಗಿ ಜಾತ್ರೋತ್ಸವಕ್ಕೆ ಬರುವ ಭಕ್ತರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯ ಮಾಡುವ ಕುರಿತಂತೆ ಚರ್ಚೆಗಳು ನಡೆದಿದೆ. ಮಾಸ್ಕ್ ಧರಿಸದವರಿಗೆ ದಂಡದ ಬೆದರಿಕೆ ಬದಲು ಮಾಸ್ಕ್ ಕೊಡಿಸುವ ಕೆಲಸವಾಗಬೇಕು ಎಂದು ಶಾಸಕ ಮಠಂದೂರು ಹೇಳಿದ್ದಾರೆ.
ಜೊತೆಗೆ ಜಾತ್ರೆಯ ಗದ್ದೆಯಲ್ಲಿ ಆರೋಗ್ಯ ಕೇಂದ್ರದ ಕೌಂಟರ್ ತೆರೆಯುವಂತೆ ಸಲಹೆ ಕೊಟ್ಟಿರುವ ಶಾಸಕರು, ಅಗತ್ಯ ಬಿದ್ದರೆ ಕೊರೋನಾ ಪರೀಕ್ಷಾ ಸೆಂಟರ್ ಹಾಗೂ ಸಾಧ್ಯವಾದರೆ ಕೊರೋನಾ ಲಸಿಕೆ ಕೊಡಿಸುವ ವ್ಯವಸ್ಥೆಯೂ ಇರಬೇಕು ಅಂದಿದ್ದಾರೆ.
ಕೇಂದ್ರದ ನಿಯಮಗಳ ಪ್ರಕಾರ ಕೊರೋನಾ ಲಸಿಕೆಯನ್ನು ಹೊರಗಡೆ ಕೊಡಿಸುವುದು ಸಾಧ್ಯವಿಲ್ಲ. ನಿಗದಿತ ಕೇಂದ್ರಗಳಲ್ಲೇ ಲಸಿಕಾ ಕಾರ್ಯಕ್ರಮ ನಡೆಯಬೇಕಾಗಿದೆ. ಬದಲಾಗಿ ಮಾಸ್ಕ್ ಧರಿಸದವರಿಗೆ ಜಾತ್ರೆ ಗದ್ದೆಯಲ್ಲೇ ಕೊರೋನಾ ಪರೀಕ್ಷೆಗೆ ವ್ಯವಸ್ಥೆ ಮಾಡಿದರೆ ನಿಜಕ್ಕೂ ಉತ್ತಮ ಕಾರ್ಯವೇ ಸರಿ. ಇದೇ ವೇಳೆ ಮಾತನಾಡಿದ ಸಹಾಯಕ ಕಮಿಷನಕ್ ಡಾ.ಯತೀಶ್ ಉಳ್ಳಾಲ್, ಈಗಾಗಲೇ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆ ಪ್ರಕಾರ ಜಾತ್ರೆ, ನೇಮಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ಮತ್ತೊಂದು ಮಾರ್ಗಸೂಚಿಯನ್ನು ಜಿಲ್ಲಾ ಸಚಿವರೊಂದಿಗೆ ಸಭೆ ನಡೆಸಿ ಪ್ರಕಟಿಸುವುದಾಗಿ ಹೇಳಿದರು.
ಈ ಸಭೆ 29 ರಂದು ನಡೆದಿದ್ದು, 30 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮ ನಿರ್ಬಂಧಿಸಿ ಹೊರಡಿಸಿರುವ ಆದೇಶ ಹೊರ ಬಿದ್ದಿದೆ. ಹೀಗಾಗಿ ಜಾತ್ರೆ ಕಳೆದ ವರ್ಷದಂತೆ ಭಕ್ತರಿಲ್ಲದೆ ನಡೆಯುತ್ತದೆಯೇ ಅನ್ನುವ ಪ್ರಶ್ನೆ ಎದ್ದಿದೆ.
Discussion about this post