ನವದೆಹಲಿ : ಹೇಗಾದರೂ ಸರಿ ಈ ಬಾರಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸೋಲಿಸಲೇಬೇಕು ಎಂದು ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಮಾತ್ರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿಯೇ ಸಿದ್ದ ಎಂದು ಕೂತಿದ್ದಾರೆ.
ಹೀಗಾಗಿ ಮುಂದಿನ ವರ್ಷದ ಚುನಾವಣೆಗೆ ಸಿದ್ದತೆ ಶುರುವಿಟ್ಟುಕೊಂಡಿರುವ ಅವರು, ಜನರಿಗೆ ಹತ್ತಿರವಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಈ ಮೂಲಕ ಬಿಜೆಪಿ ಮತ ಬ್ಯಾಂಕ್ ಗಳನ್ನು ತಮ್ಮತ್ತ ಸೆಳೆಯಲು ರಣ ತಂತ್ರ ರೂಪಿಸಿದ್ದಾರೆ.
ಕ್ಯಾಲೆಂಡರ್ ಮೂಲಕ ಇಂದಿರಾ ಗಾಂಧಿ ನೆನಪು
ಅಮಾವಸ್ಯೆ ಯಾವಾಗ, ಹುಣ್ಣಿಮೆ ಯಾವಾಗ ಅನ್ನುವುದು ಜನರ ಬಾಯಲ್ಲೇ ಇರುವಂತೆ ಪ್ರಿಯಾಂಕ ವಾದ್ರಾ ಅವರ ಉತ್ತರ ಪ್ರದೇಶ ಪ್ರವಾಸವೂ ಜನರ ತಲೆಯಲ್ಲಿ ಅಚ್ಚೊತ್ತಬೇಕು ಎಂದು ನಿರ್ಧರಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರಿಯಾಂಕ ಅವರ ಉತ್ತರ ಪ್ರದೇಶ ಪ್ರವಾಸದ ವಿವರಗಳನ್ನು ಹೊಂದಿರುವ ಆಕರ್ಷಕ ಕ್ಯಾಲೆಂಡರ್ ಅನ್ನು ಮುದ್ರಿಸಿ ಹಂಚಲಾಗುತ್ತಿದೆ.
ಇದೇ ಕ್ಯಾಲೆಂಡರ್ ನಲ್ಲಿ ರಾಜ್ಯ ನಾಯಕರ ಜನ ಸಂಪರ್ಕ ಸಭೆಯ ವಿವರಗಳನ್ನು ಕೂಡಾ ಮುದ್ರಿಸಲಾಗಿದೆ. ಈ ಮೂಲಕ ರಾಜ್ಯ ನಾಯಕರಿಗೂ ಬಿಸಿ ಮುಟ್ಟಿಸಲಾಗಿದೆ.
ಆಕರ್ಷಕ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ನೋಡಿದರೆ ಇಂದಿರಾ ಗಾಂಧಿಯ ಚಿತ್ರವೊಂದು ಕಣ್ಣ ಮುಂದೆ ಹಾದು ಹೋಗುತ್ತದೆ.
ಈಗಾಗಲೇ 10 ಲಕ್ಷ ಕ್ಯಾಲೆಂಡರ್ ಗಳನ್ನು ಹಂಚಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಯಾಲೆಂಡರ್ ಗಳು ವಾರ್ಡ್ ಮಟ್ಟಕ್ಕೆ ತಲುಪಲಿದೆ.
Discussion about this post