ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ
ರಾಜ್ಯದಲ್ಲಿ ಶೇಕಡ 80ರಷ್ಟು ಬಿಪಿಎಲ್ ಕಾರ್ಡು ಹೊಂದಿದ್ದು ತಮಿಳುನಾಡಿನಲ್ಲಿ ಶೇಕಡ 40ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇಕಡ ೫.೬೭ ಇರಬೇಕು. ಆದರೆ ರಾಜ್ಯದಲ್ಲಿ ೧ ಕೋಟಿ ೨೭ ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡು ಒದಗಿಸಬೇಕು ಎಂದು ಸೂಚಿಸಿದ್ದಾರೆ. ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಕಲ್ಬುರ್ಗಿ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡಿ ಹಾಸ್ಟೆಲ್ ಟ್ಯಾಂಕ್ ಮೂಲಕ ಕಲುಷಿತ ನೀರಿನ ಸರಬರಾಜು ಆಗುತ್ತಿರುವ ಬಗ್ಗೆ ಬರೆದಿರುವ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಮಸ್ಯೆಯನ್ನು ಬಗೆಹರಿಸಿ ಈಗಾಗಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಿಸಿದರು. ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ನಡುವೆ ರಾಜ್ಯದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ೧೫ ದಿನಗಳಿಗೊಮ್ಮೆ ನೀರಿನ ಮೂಲದಲ್ಲಿ ಹಾಗೂ ವಿತರಣಾ ಕೇಂದ್ರದಲ್ಲಿ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದಾರೆ. ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿಯಾಗಿರುವವರಿಗೆ ಎಸ್ಡಿಆರ್ಎಫ್ ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎದುರಾಗುವ ತಾಂತ್ರಿಕ ತೊಂದರೆಗಳನ್ನು ೨ ತಿಂಗಳ ಒಳಗೆ ಬಗೆಹರಿಸಬೇಕು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ೪ ಸಾವಿರದ ೭೮೭ ಕೆರೆಗಳ ಒತ್ತುವರಿ ತೆರವಿಗೆ ಬಾಕಿಯಿದ್ದು, ಶೀಘ್ರವೇ ತೆರವು ಕಾರ್ಯ ಪೂರ್ಣಗೊಳಿಸಬೇಕು.
ಪದೇ ಪದೇ ಕೆರೆಗಳ ಒತ್ತುವರಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಹಲವು ಕೆರೆಗಳು ಕಣ್ಮರೆಯಾಗಿದ್ದು, ಉಳಿದಿರುವ ಕೆರೆಗಳನ್ನು ಉಳಿಸದೇ ಇದ್ದರೆ, ಅಂತರ್ಜಲ ಮಟ್ಟ ಕಾಪಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
Discussion about this post