ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಇನ್ನು ಕೇವಲ 18 ತಿಂಗಳು ಬಾಕಿ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ರೆ, ಕಾಂಗ್ರೆಸ್ ಮಾತ್ರ ತನ್ನ ಒಳ ಜಗಳದಲ್ಲೇ ಕಾಲ ತಳ್ಳುತ್ತಿದೆ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದ್ರು ಅನ್ನುವಂತೆ ಮುಂದಿನ ಚುನಾವಣೆಯಲ್ಲಿ ಗೆದ್ರೆ ಸಿಎಂ ಯಾರಾಗಬೇಕು ಅನ್ನುವ ಲೆಕ್ಕಚಾರದಲ್ಲೇ ಕಾಂಗ್ರೆಸ್ ಮುಳುಗಿತ್ತು.
ಸಿದ್ದರಾಮಯ್ಯ ಬಳಗದ ಜಮೀರ್ ಅಹಮ್ಮದ್ ಸೇರಿದಂತೆ ಅನೇಕ ನಾಯಕರು ಸಿದ್ದರಾಮಯ್ಯ ಅವರನ್ನು ಸಿಎಂ ಪಟ್ಟದಲ್ಲಿ ಕೂರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಡಿಕೆಶಿ ಗ್ಯಾಂಗ್ ಸುಮ್ಮನಿರುತ್ತದೆಯೇ ಖಂಡಿತಾ ಇಲ್ಲ. ಹೀಗಾಗಿ ಸಿಎಂ ಯಾರು ಅನ್ನುವ ವಿವಾದ ಕಾಂಗ್ರೆಸ್ ನಲ್ಲಿ ಬೆಂಕಿ ಹೊತ್ತಿಸಿದ ಕಾರಣ ಹೈಕಮಾಂಡ್ ಮಧ್ಯಪ್ರವೇಶಿಸಿ ಮೊದಲು ಗೆಲ್ಲೋಣ ಆಮೇಲೆ ಸಿಎಂ ತೀರ್ಮಾನ ಅಂದಿದೆ.
ಈ ನಡುವೆ ಮೂರು ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಪ್ರಕೃತಿಗೆ ಚಿಕಿತ್ಸೆಗೆ ಹೋದ ಸಿದ್ದರಾಮಯ್ಯ ತಾಕತ್ತು ಪ್ರದರ್ಶಿಸಿದ್ದಾರೆ. ಪ್ರಕೃತಿ ಚಿಕಿತ್ಸೆಯಿಂದ ಬಂದ ಬೆನ್ನಲ್ಲೇ ಸಿದ್ದರಾಮಯ್ಯ ಹುಡುಗ್ರು ಚುರುಕುಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಸಿದ್ದರಾಮಯ್ಯ ಅನಿವಾರ್ಯ ಎಂದು ಮಾತನಾಡಲಾರಂಭಿಸಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪಕ್ಷ ಗೆಲ್ಲಿಸುವ ತಾಕತ್ತಿಲ್ಲ ಅನ್ನುವ ಅಭಿಪ್ರಾಯ ಮೂಡಿಸಲಾರಂಭಿಸಿದ್ದಾರೆ.
ಇದರ ಮುಂದುವರಿದ ಭಾಗವಾಗಿ 2023ರಲ್ಲಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ನಡೆಯಲಿದ್ದು, ಡಿಕೆಶಿಯವರು ಮಾರ್ಗದರ್ಶಕರಾಗಿರುತ್ತಾರೆ ಎಂದು ಶಾಸಕ ಭೈರತ್ತಿ ಸುರೇಶ್ ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರಿಗೆ ಮಾರ್ಗದರ್ಶಕ ಪಟ್ಟ ಕಟ್ಟಿ ಸೈಡಿಗಿಡುವ ಪ್ರಯತ್ನ ಮಾಡಲಾಗಿದೆ. ಒಂದು ವೇಳೆ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಯಕತ್ವ ವಹಿಸಿಕೊಂಡವರು ಸಿಎ ಆಗ್ತಾರೆ ಹೊರತು ಮಾರ್ಗದರ್ಶಕರು ಸಿಎಂ ಆಗೋದಿಲ್ಲ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭೈರತ್ತಿ ಹೇಳಿರುವ ಈ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದರೆ, ಡಿಕೆಶಿ ಬಳಗದಲ್ಲಿ ಹೊಸ ಕಿಡಿ ಹೊತ್ತಿಸಿದೆ.
Discussion about this post