ಉಡುಪಿ : ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನಾಗಿ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಅವರನ್ನು ನೇಮಿಸಲಾಗಿದೆ.
ಶೀರೂರು ಮಠದ ಲಕ್ಷ್ಮೀವರ ತೀರ್ಥರು ಸಂಶಯಾಸ್ಪದ ರೀತಿಯಲ್ಲಿ ತೀರಿಕೊಂಡ ಎರಡು ವರ್ಷ ಒಂಭತ್ತು ತಿಂಗಳ ಬಳಿಕ ಶಿರೂರಿನ ದ್ವಂದ ಮಠವಾಗಿರುವ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ನೂತನ ಪೀಠಾಧಿಪತಿಯ ಹೆಸರು ಘೋಷಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠದಲ್ಲಿ ಮೇ 11ರಿಂದ 14ರವರೆಗೆ ಶಿಷ್ಯ ಸ್ವೀಕಾರದ ವಿಧಿ ವಿಧಾನಗಳು ಜರುಗಲಿವೆ.
ಅನಿರುದ್ಧ್ ಸರಳತ್ತಾಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿದ್ದು, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ SSLC ಕಲಿತಿದ್ದಾರೆ.
ಇದನ್ನೂ ಓದಿ : ಉಡುಪಿಯ ಅಷ್ಟಮಠದಲ್ಲಿ ಮತ್ತೆ ಶುರುವಾಯ್ತು ಜಗಳ –ಮಠವೆಂದರೆ ಅದೇನೂ ಕುಟುಂಬದ ಆಸ್ತಿಯೇ..?
ಅನಿರುದ್ಧ್ ಸರಳತ್ತಾಯ ಸೋದೆ ಮಠದ ಪ್ರಧಾನ ವೈದಿಕರಲ್ಲಿ ಒಬ್ಬರಾದ ಉದಯ ಸರಳತ್ತಾಯರ ಪುತ್ರನಾಗಿದ್ದಾರೆ. ಮಠದ ವೈದಿಕರ ಪುತ್ರ ಅನ್ನುವ ಕಾರಣಕ್ಕಾಗಿ ಈ ಆಯ್ಕೆ ನಡೆದಿಲ್ಲ. ಬದಲಾಗಿ 16 ವರ್ಷದ ಅನಿರುದ್ಧ್ ಸರಳತ್ತಾಯ ಜಾತಕದಲ್ಲಿ ಸನ್ಯಾಸ ಯೋಗ ಇರುವುದನ್ನು ಗಮನಿಸಿ ನೇಮಿಸಲಾಗಿದೆ.
ಇನ್ನು ಪುತ್ರನ ಸಂನ್ಯಾಸ ಸ್ವೀಕಾರದ ಬಗ್ಗೆ ಮಾತನಾಡಿರುವ ಉದಯ ಸರಳತ್ತಾಯ ಅವನಿಗೆ ಸನ್ಯಾಸಿಯಾಗುವ ಯೋಗವಿದ್ದ ಕಾರಣದಿಂದಲೇ ಆತ ಹಿಂದೆಯೆ ಸನ್ಯಾಸಿಯಾಗುವ ಆಸೆ ವ್ಯಕ್ತಪಡಿಸಿದ್ದ ಅಂದಿದ್ದಾರೆ.
ಇನ್ನು ಶಿರೂರು ಮಠದ ಲಕ್ಷ್ಮೀವರ ತೀರ್ಥರು ತೀರಿಕೊಂಡ ಸಂದರ್ಭದಲ್ಲಿ ಹಲವು ಗೊಂದಲಗಳಿತ್ತು. ಶಿರೂರು ಮಠದೊಳಗೆ ನೂರಾರು ಸಮಸ್ಯೆಗಳಿತ್ತು. ಆಸ್ತಿ ವಿವಾದಗಳಿತ್ತು. ಹಾಗಂತ ಇದೀಗ ಎಲ್ಲವೂ ಮುಗಿದಿಲ್ಲ. ನ್ಯಾಯಾಲಯದಲ್ಲಿ ಕೆಲ ಪ್ರಕರಣಗಳೂ ಇನ್ನೂ ನಡೆಯುತ್ತಿದೆ. ಎಲ್ಲವನ್ನೂ ನಿಭಾಯಿಸಿರುವ ವಿಶ್ವವಲ್ಲಭ ತೀರ್ಥರು ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ.ನಾಳೆ ಮತ್ತಷ್ಟು ತಲೆನೋವು ಬರಲಿದೆ ಅನ್ನುವುದು ಅವರಿಗೂ ಗೊತ್ತಿದ್ದೂ ಈ ಕಾರ್ಯ ಮಾಡಿದ್ದಾರೆ ಅಂದ್ರೆ ಅವರ ಧೈರ್ಯವನ್ನು ಮೆಚ್ಚಲೇಬೇಕು.
Discussion about this post