ಆಗ್ರಾ : ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಕಳೆದ ಕೆಲ ದಿನಗಳಿಂದ ನಿಗೂಢ ಜ್ವರ ಎಂದು ಬಿಂಬಿತವಾಗಿದ್ದು ಇದೀಗ ಡೆಂಘೀ ಜ್ವರ ಎಂದು ಸಾಬೀತಾಗಿದೆ. ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಕೊರೋನಾವನ್ನು ಮೀರಿಸಿ ಡೆಂಘೀ ಅಬ್ಬರಿಸುತ್ತಿದೆ. ಅದರಲ್ಲೂ ಫಿರೋಜಾಬಾದ್ ನಲ್ಲಿ ಈ ವೈರಸ್ ಜ್ವರ 12 ಸಾವಿರ ಜನರನ್ನು ಹಾಸಿಗೆ ಹಿಡಿಯುವಂತೆ ಮಾಡಿದೆ.
ಇನ್ನು ಫಿರೋಜಾಬಾದ್ ಒಂದರಲ್ಲೇ ಡೆಂಘೀಗೆ ಬಲಿಯಾದವರ ಸಂಖ್ಯೆ 114ಕ್ಕೆ ಏರಿದ್ದು, ಈ ಪೈಕಿ 88 ಮಂದಿ ಮಕ್ಕಳು. ಜ್ವರ ತೀವ್ರತೆಯನ್ನು ಗಮನಿಸಿರುವ National Centre for Disease Control (NCDC) ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಸೋಂಕು ಕಾಣಿಸಿಕೊಂಡಿರುವ ಹಾಗೂ ಸೋಂಕು ಕಾಣಿಸಿಕೊಳ್ಳಬಹುದಾದ ಪ್ರದೇಶಗಳಲ್ಲಿ ಫಾಂಗಿಗ್ ಮಾಡುವುದು, ಸೋಂಕಿತರ ಪತ್ತೆಗಾಗಿ ಮನೆ ಮನೆ ಸರ್ವೇ, ಹಾಗೂ ಅನಗತ್ಯವಾಗಿ ನಿಂತಿರುವ ನೀರನ್ನು ಹೊರಹಾಕುವಂತೆ ಸೂಚಿಸಲಾಗಿದೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ 12 ಸಾವಿರಕ್ಕೂ ಹೆಚ್ಚು ಮಂದಿ ಡೆಂಘೀ ಪೀಡಿತರಾಗಿದ್ದು, ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಧಿಕೃತ ದಾಖಲೆಗಳ ಪ್ರಕಾರ ಫಿರೋಜಾ ಬಾದ್ ನಲ್ಲಿ ಈವರೆಗೆ 578 ಡೆಂಘೀ ಪ್ರಕರಣಗಳು ದೃಢಪಟ್ಟಿದ್ದು, ಮಲೇರಿಯಾ ಕೂಡಾ ಕಾಣಿಸಿಕೊಂಡಿದೆ.
ಈ ನಡುವೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಖಾಸಗಿ ಆಸ್ಪತ್ರೆಗಳು ಹಣದ ದಾಹ ತೋರಿದ್ದು, ಚಿಕಿತ್ಸಾ ವೆಚ್ಚ ರಾಕೆಟ್ ವೇಗದಲ್ಲಿ ಏರಿದೆ. ಯಾರಾದರೂ ಜ್ವರದ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬಂದರೆ ಮೊದಲು ಮೂವತ್ತು ಸಾವಿರ ರೂಪಾಯಿ ಪಾವತಿಸಿ ಬಳಿಕ ಆಡ್ಮಿಟ್ ಮಾಡಿಕೊಳ್ಳುತ್ತೇವೆ ಅನ್ನುತ್ತಿದ್ದಾರಂತೆ. ಇದರೊಂದಿಗೆ ಆಸ್ಪತ್ರೆಗಳಲ್ಲಿ ಪ್ಲೆಟ್ಲೇಟ್ ಕೊರೆತ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿದೆ. ಇನ್ನು ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
Discussion about this post