ರಾಜ್ಯದಲ್ಲಿ ಅಪರಾಧ ತಡೆಯಲು ೬ ಸಾವಿರ ಸಿಸಿ ಕ್ಯಾಮರಾ
ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದ ಅವರು ಪೊಲೀಸರ ಮಕ್ಕಳಿಗಾಗಿ ೭ ಪ್ರಮುಖ ಸ್ಥಳಗಳಲ್ಲಿ ೭ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ೧೦ ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ ೨ ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. ಧ್ವನಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೧೦೦ ಹೊಸ ಠಾಣೆಗಳ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು ಪೊಲೀಸ್ ಸಿಬ್ಬಂದಿ. ಹೀಗಾಗಿ ಇವರ ಜವಾಬ್ದಾರಿ ಬಹಳ ದೊಡ್ಡದು ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿ ಅಪರಾಧ ತಡೆಯಲು ೬ ಸಾವಿರ ಸಿಸಿ ಕ್ಯಾಮರಾಗಳು, ೨೬೦ ಕ್ಕೂ ಹೆಚ್ಚು ಹೆದ್ದಾರಿ ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.