ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂದು ಬಾಗಲಕೋಟೆಯಲ್ಲಿ ಕೊರೋನಾ ಮತ್ತೆ ಅಬ್ಬರಿಸಿದೆ. ಕಳೆದ ಕೆಲವು ದಿನಗಳಿಂದ ಬಾಗಲಕೋಟೆಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ವಿಪರೀತವಾಗಿ ಏರುತ್ತಿದೆ.
ಇಂದು ಕೊರೋನಾ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೂ ವ್ಯಾಪಿಸಿದೆ. ಬಾದಾಮಿ ಕ್ಷೇತ್ರದ ಡಾಣಕಶಿರೂರದಲ್ಲಿ ಗರ್ಭಿಣಿ ಮಹಿಳೆಯೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ಜಾಗದಲ್ಲಿ ಇಂದು 13 ಮಂದಿಗೆ ಸೋಂಕು ಹರಡಿದೆ.ಮಾತ್ರವಲ್ಲದೆ ಗರ್ಭಿಣಿ ಮಹಿಳೊಬ್ಬರಿಂದಲೇ 12 ಮಂದಿಗೆ ಸೋಂಕು ಹರಡಿದೆ. ಇನ್ನೊಬ್ಬರಿಗೆ ಸೋಂಕು ಹೇಗೆ ಅಂಟಿಕೊಳ್ತು ಅನ್ನುವುದು ನಿಗೂಢವಾಗಿದೆ.
ಈ ನಡುವೆ ಕೊರೋನಾ ಸೋಂಕಿತ ಜಿಲ್ಲೆಗಳಲ್ಲಿ ಅಲ್ಲಿನ ಜನಪ್ರತಿನಿಧಿಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಿಟ್ ಹಂಚಿಕೆ ಸೇರಿದಂತೆ ಅನೇಕ ಕಾರ್ಯಗಳನ್ನು ಸ್ಥಳೀಯಕ ಶಾಸಕರು ಮಾಡುತ್ತಿದ್ದಾರೆ. ಆದರೆ ಸಂಕಷ್ಟ ಕಾಲದಲ್ಲೂ ಬಾದಾಮಿ ಕ್ಷೇತ್ರದ ಕಡೆ ಸಿದ್ದರಾಮಯ್ಯ ಹೋಗಿಯೇ ಇಲ್ಲ. ಎಲ್ಲವನ್ನೂ ಅವರ ಬೆಂಬಲಿಗರೇ ನೋಡಿಕೊಳ್ಳುವಂತೆ ಕಾಣಿಸುತ್ತಿದೆ.
ಕಾಂಗ್ರೆಸ್ ನಾಯಕರು ಬಿಜೆಪಿ ಎಂಪಿಗಳು ನಾಪತ್ತೆ ಎಂದು ನಿತ್ಯ ದೂರುತ್ತಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಕ್ಷೇತ್ರದ ಕಡೆ ಹೋಗದಿರುವುದು ದುರಂತವೇ ಸರಿ. ಕನಿಷ್ಟ ಪಕ್ಷ ಸ್ವ ಕ್ಷೇತ್ರದಲ್ಲೇ ಕೊರೋನಾ ರಣ ಕೇಕೆ ಹಾಕುತ್ತಿದೆ ಅಂದಾಗ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಬೇಕಿತ್ತು. ಅಧಿಕಾರಿಗಳ ಕಾರ್ಯಕ್ಕೆ ಚುರುಕುಮುಟ್ಟಿಸಬೇಕಿತ್ತು. ಜನತಯಲ್ಲಿ ಧೈರ್ಯ ಮೂಡಿಸಬೇಕಿತ್ತು.
ಗೆಲ್ಲಿಸಿದ ಕ್ಷೇತ್ರಕ್ಕೆ ಒಬ್ಬ ಮಾಜಿ ಮುಖ್ಯಮಂತ್ರಿಯೇ ಸಂಕಷ್ಟ ಕಾಲದಲ್ಲಿ ತೆರಳದಿರುವುದು ನಿಜಕ್ಕೂ ದುರಂತವೇ ಸರಿ. ಚುನಾವಣೆ ಬಂದಾಗ ಮತ ಕೇಳಲು ಮನೆ ಮನೆಗೆ ತೆರಳುವ ಜನಪ್ರತಿನಿಧಿಗಳು ಜನತೆಗೆ ಸಂಕಷ್ಟ ಬಂದಿದೆ ಅಂದಾಗ ದೂರ ಸರಿಯುವುದು ದುರಂತವೇ ಸರಿ.
ಸಿದ್ದರಾಮಯ್ಯರಂತಹ ನಾಯಕರು ಉಳಿದ ಜನಪ್ರತಿನಿಧಿಗಳು ಮಾದರಿಯಾಗಬೇಕು, ಅದನ್ನು ಬಿಟ್ಟು ತಮ್ಮ ಕ್ಷೇತ್ರಕ್ಕೆ ಹೋಗದೆ ಬೆಂಗಳೂರಿನಿಂದ ಎಲ್ಲವನ್ನೂ ನಿಭಾಯಿಸುವುದು ಸರಿಯೇ.
ಹಿಂದೊಮ್ಮೆ ಕಲಬುರಗಿಯಲ್ಲಿ ಕೊರೋನಾ ಅಬ್ಬರಿಸಿದಾಗ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಗೆ ಹೋಗಲು ಹಿಂದೇಟು ಹಾಕಿದ್ದರು. ಅದಕ್ಕೆ ಕೊಟ್ಟ ಕಾರಣವೂ ವಿಚಿತ್ರವಾಗಿತ್ತು.
ಇನ್ನಾದರೂ ಸಿದ್ದರಾಮಯ್ಯ ಅವರು ಬಾದಾಮಿಗೆ ತೆರಳಿ ಮತ ಕೊಟ್ಟ ಮತದಾರನಿಗೆ ಧೈರ್ಯ ತುಂಬ್ತಾರ ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಅವರಿಗೆ ಆನೇಕಲ್ ಗೆ ಹೋಗಿ ಅಲ್ಲಿನ ಶಾಸಕರು ತಯಾರಿಸಿದ ಕಿಟ್ ಗಳನ್ನು ಪರಿಶೀಲನೆ ನಡೆಸಲು ಟೈಮ್ ಇದೆ. ಆದರೆ ತಮ್ಮ ಕ್ಷೇತ್ರದ ಕಿಟ್ ಗಳನ್ನು ಪರಿಶೀಲಿಸಲು ಟೈಮ್ ಇಲ್ಲ ಅಂದ್ರೆ ಏನ್ ಹೇಳೋಣ.
Discussion about this post