ಕರ್ನಾಟಕದ ಪ್ರಜ್ಞಾವಂತರು ಇಂದು ತಲೆ ತಗ್ಗಿಸಿ ನಿಲ್ಲಬೇಕಾದ ದಿನ.ಕೇವಲ ಪರಿಷತ್ ಸಭಾಪತಿ ಪೀಠಕ್ಕಾಗಿ ವಿಧಾನ ಪರಿಷತ್ ನಲ್ಲಿ ಹೊಡೆದಾಟ ಬಡಿದಾಟವೇ ನಡೆದು ಹೋಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಎಳೆದಾಡಿದ್ದು, ಅದ್ಯಾವ ಬೀದಿ ರೌಡಿಗಳಿಗೂ ಕಡಿಮೆ ಇಲ್ಲದಂತೆ ವರ್ತಿಸಿದ್ದಾರೆ. ಇವತ್ತಿನ ಹೋರಾಟ ನೋಡಿದರೆ ಎಣ್ಣೆಯಂಗಡಿಗಳಲ್ಲಿ ಕುಡಿದು ಗಲಾಟೆ ಮಾಡುವವರು ಎಷ್ಟೋ ವಾಸಿ ಅನ್ನಿಸಿತು.
ವಿಧಾನ ಪರಿಷತ್ ಅಂದ್ರೆ ಅದು ಹಿರಿಯರ ಮನೆ, ಬುದ್ದಿವಂತರ ಮನೆ ಅನ್ನುವ ಗೌರವಗಳಿದೆ. ಆದರೆ ಆ ಎಲ್ಲಾ ಗೌರವಗಳನ್ನು ಇಂದು ಗೌರವಾನ್ವಿತ ಮಾನ್ಯ ವಿಧಾನ ಪರಿಷತ್ ಸದಸ್ಯರು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ನೀತಿ ನಿಯಮ ಕಾನೂನು ಎಲ್ಲವನ್ನೂ ಗಾಳಿಗೆ ತೂರಿ ಕುರ್ಚಿಗಾಗಿ ನಾವು ಏನೂ ಬೇಕಾದರೂ ಮಾಡಲು ಸಿದ್ಧ ಎಂದು ತೋರಿಸಿದ್ದಾರೆ.
ಇಡೀ ಕರುನಾಡು ಇಂದಿನ ಪ್ರಕರಣವನ್ನು ನೋಡಿ ಶೇಮ್ ಶೇಮ್ ಶೇಮ್ ಅನ್ನುತ್ತಿದೆ. ಆದರೆ ಇಷ್ಟೆಲ್ಲಾ ಕಿತ್ತಾಡಿದ ಅದ್ಯಾವ ರಾಜಕಾರಣಿಗೂ ತಪ್ಪಾಗಿದೆ ಕ್ಷಮಿಸಿ ಅನ್ನುವ ಮಾತು ಕಾಟಚಾರಕ್ಕೂ ಬಂದಿಲ್ಲ.
ಒಟ್ಟಿನಲ್ಲಿ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಮತ್ತೊಂದು ಕಪ್ಪು ಚುಕ್ಕೆಯನ್ನು ಬರೆದ ಹಿರಿಮೆ ಹಿರಿಯರ ಮನೆ ಎಂದು ಕರೆಸಿಕೊಂಡ ವಿಧಾನ ಪರಿಷತ್ ಸದಸ್ಯರಿಗೆ ಸಲ್ಲುತ್ತದೆ.